ಹಾಲಿವುಡ್ನ ಬ್ಲಾಕ್ ಪ್ಯಾಂಥರ್ ಸಿನಿಮಾದ ಖ್ಯಾತ ನಟ ಚ್ಯಾಡ್ವಿಕ್ ಬೋಸ್ಮನ್ ಕ್ಯಾನ್ಸರ್ ನಿಂದ ಇಂದು ಕೊನೆಯುಸಿರೆಳೆದಿದ್ದಾರೆ.
43 ವರ್ಷದ ಬೋಸ್ಮನ್ ಕಳೆದ ಕೆಲವು ವರ್ಷಗಳಿಂದ ದೊಡ್ಡ ಕರುಳಿನ ಕ್ಯಾನ್ಸರ್ ನಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಸಾವಿನ ಬಗ್ಗೆ ಕುಟುಂಬಸ್ಥರು ಮಾಹಿತಿಯನ್ನು ಚ್ಯಾಡ್ವಿಕ್ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಹಲವಾರು ಆಪರೇಷನ್ ಹಾಗೂ ಕೀಮೋಥೆರಪಿ ನಡುವೆಯೇ ದೊಡ್ಡ ದೊಡ್ಡ ಹಾಲಿವುಡ್ ಸಿನಿಮಾಗಳಲ್ಲಿ ಬೋಸ್ಮನ್ ನಟಿಸಿದ್ದರು. 2016ರಲ್ಲಿ ಬೋಸ್ಮನ್ ಅವರಿಗೆ ಸ್ಟೇಜ್ 3 ಕ್ಯಾನ್ಸರ್ ಇರೋದು ಪತ್ತೆಯಾಗಿತ್ತು. 4 ವರ್ಷದ ಅವರ ಹೋರಾಟದ ಹೊರತಾಗಿಯೂ ಸ್ಟೇಜ್ 4ಗೆ ತಲುಪಿತ್ತು ಎಂದು ತಿಳಿಸಲಾಗಿದೆ.
2018ರಲ್ಲಿ ಬಿಡುಗಡೆಯಾಗಿದ್ದ ಬ್ಲಾಕ್ ಪ್ಯಾಂಥರ್ ಸಿನಿಮಾ ಭರ್ಜರಿ ಹಿಟ್ ಆಗಿ, ವಿಶ್ವದಾದ್ಯಂತ 1 ಬಿಲಿಯನ್ ಡಾಲರ್(ಸುಮಾರು 7000 ಕೋಟಿ ರೂಪಾಯಿ) ಗಳಿಸಿತ್ತು. ಅಲ್ಲದೆ ಆಸ್ಕರ್ನಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ನಾಮಿನೇಟ್ ಆದ ಮೊದಲ ಕಾಮಿಕ್ ಬುಕ್ ಸಿನಿಮಾ ಎನಿಸಿಕೊಂಡಿತ್ತು. ಬೋಸ್ಮನ್ ನಿಧನಕ್ಕೆ ಜಗತ್ತಿನಾದ್ಯಂತ ಹಲವು ಗಣ್ಯರು ಹಾಗೂ ಸಿನಿಮಾ ಸ್ಟಾರ್ಗಳು ಸಂತಾಪ ಸೂಚಿಸಿದ್ದಾರೆ.