ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಅವರನ್ನು ರಾಜ್ಯ ಸರ್ಕಾರ ಕೃಷಿ ಇಲಾಖೆಯ ರಾಯಭಾರಿಯಾಗಿ ನೇಮಿಸಿದೆ.
ಅರಣ್ಯ ಇಲಾಖೆ ರಾಯಭಾರಿ ಆಗಿಯೂ ಕಾರ್ಯ ನಿರ್ವಹಿಸುತ್ತಿರುವ ದರ್ಶನ್ ಮೈಸೂರಿನ ಫಾರ್ಮ್ಹೌಸ್ನಲ್ಲಿ ಸಾಕಷ್ಟು ಪ್ರಾಣಿ-ಪಕ್ಷಿಗಳನ್ನ ದರ್ಶನ್ ಸಾಕಿಕೊಂಡಿದ್ದಾರೆ. ಸ್ಟಾರ್ ಅನ್ನೋ ಹಮ್ಮುಬಿಮ್ಮು ಇಲ್ಲದೇ ತಮ್ಮ ತೋಟದ ಮನೆಯಲ್ಲಿ ಈಗಲೂ ರೈತನಂತೆ ದುಡೀತಾರೆ ದರ್ಶನ್. ರೈತರು ಹಾಗೂ ಕೃಷಿ ಚಟುವಟಿಕೆಗಳ ಬಗ್ಗೆ ದರ್ಶನ್ ಅವರಿಗಿರುವ ಕಾಳಜಿ ಕಂಡು ಇದೀಗ ಸರ್ಕಾರ ಅವರನ್ನ ಕೃಷಿ ಇಲಾಖೆಯ ರಾಯಭಾರಿಯಾಗಿ ನೇಮಕ ಮಾಡಿದೆ.
ಕೃಷಿ ಇಲಾಖೆಯ ರಾಯಭಾರಿಯಾಗಲು ದರ್ಶನ್ ಆಸಕ್ತಿ ತೋರಿದ್ದಾರೆ. ಯಾವುದೇ ಸಂಭಾವನೆ ಪಡೆಯದೇ ಕೃಷಿಪರ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಾಗಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರಿಗೆ ತಿಳಿಸಿದ್ದಾರೆ.
ಭಾನುವಾರ (ಜ.24) ಕಾರ್ಯಕ್ರಮವೊಂದರ ನಿಮಿತ್ತ ಬಿ.ಸಿ. ಪಾಟೀಲ್ ಚಾಮರಾಜನಗರಕ್ಕೆ ಹೋಗಿದ್ದರು. ವಾಪಸ್ಸಾಗುವಾಗ ಊಟಕ್ಕೆಂದು ದರ್ಶನ್ ಅವರು ಪಾಟೀಲ್ ಅವರನ್ನು ತಮ್ಮ ತೋಟಕ್ಕೆ ಕರೆದಿದ್ದಾರೆ. ಅಲ್ಲಿಯೇ ಇಡೀ ತೋಟವನ್ನು ಸುತ್ತಾಡಿದ ಬಿ.ಸಿ. ಪಾಟೀಲ್, ದರ್ಶನ್ ಅವರ ಕೃಷಿಪ್ರೇಮವನ್ನು ಕಂಡು ಖುಷಿ ಪಟ್ಟಿದ್ದಾರೆ.