ಹೈದರಾಬಾದ್: ತೆಲುಗಿನ ಅರುಂಧತಿ ಚಿತ್ರದ ಪ್ರಖ್ಯಾತ ನಿರ್ದೇಶಕ ಕೋಡಿ ರಾಮಕೃಷ್ಣ(64) ಇಂದು ಕೊನೆಯುಸಿರೆಳೆದಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದರಿಂದಾಗಿ ನಿನ್ನೆ ಮುಂಜಾನೆ ಹೈದರಾಬಾದ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೆ ಇಂದು ನಿಧನರಾಗಿದ್ದಾರೆ.
ಅರುಂಧತಿ, ನಾಗರಹಾವು(2016), ಅಂಜಿ, ಅವತಾರಂ ರೀತಿಯ ಅದ್ಭುತ ಸಿನಿಮಾಗಳನ್ನ ಕೋಡಿ ರಾಮಕೃಷ್ಣ ಅವರು ನಿರ್ದೇಶಿಸಿದ್ದರು. ಸುಮಾರು 100ಕ್ಕೂ ಅಧಿಕ ಚಿತ್ರಗಳನ್ನು ನಿರ್ದೇಶಿಸಿದ್ದ ಖ್ಯಾತಿ ಗಳಿಸಿರುವ ಕೋಡಿ ರಾಮಕೃಷ್ಣ ಅವರು ಕನ್ನಡದಲ್ಲಿ 2016ರಲ್ಲಿ ತೆರೆಕಂಡ ಡಾ.ವಿಷ್ಣುವರ್ಧನ್ ಅವರನ್ನೊಳಗೊಂಡಿದ್ದ ರಮ್ಯಾ ನಾಯಕಿಯಾಗಿದ್ದ ನಾಗರಹಾವು ಚಿತ್ರವನ್ನು ನಿರ್ದೇಶಿಸಿದ್ದರು.
ತೆಲುಗು, ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ತೆಲುಗು ಸಿನಿಮಾ ರಂಗಕ್ಕೆ ನೀಡಿದ ಕೊಡುಗೆಯನ್ನು ಆಧರಿಸಿ 2012ರಲ್ಲಿ ರಘುಪತಿ ವೆಂಕಯ್ಯ ಪ್ರಶಸ್ತಿಯು ದೊರಕಿದೆ.