ನವದೆಹಲಿ: ‘ಕೆ.ಜಿ.ಎಫ್’ ಚಿತ್ರದ ಮೂಲಕ ನ್ಯಾಶನಲ್ ಸ್ಟಾರ್ ಆಗಿ ಹೊರ ಹೊಮ್ಮಿರುವ ರಾಕಿಂಗ್ ಸ್ಟಾರ್ ಯಶ್ ಅವರು ಇದೀಗ ಮತ್ತೊಂದು ಗೌರವಕ್ಕೆ ಪಾತ್ರರಾಗಿದ್ದಾರೆ.
‘ಜಿ ಕ್ಯೂ ಇಂಡಿಯಾ’ ಭಾರತದ 50 ಪ್ರಭಾವ ಬೀರುವ ವ್ಯಕ್ತಿಗಳ ಪಟ್ಟಿಯಲ್ಲಿ ಯಶ್ ಸ್ಥಾನ ಪಡೆದಿದ್ದು, ಮುಂಬೈನಲ್ಲಿ ‘ಜಿ ಕ್ಯೂ ಇಂಡಿಯಾ’ ಯಶ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದೆ. ವಿವಿಧ ರಂಗದಲ್ಲಿ ಸಾಧನೆ ಮಾಡಿ, ಇತರರ ಮೇಲೆ ಪ್ರಭಾವ ಬೀರುವ ಭಾರತದ 50 ಮಂದಿಯನ್ನು ‘GQ ಇಂಡಿಯಾ’ ಗುರುತಿಸುತ್ತದೆ. ಈ ವರ್ಷ ಈ ಪಟ್ಟಿಯಲ್ಲಿ ಯಶ್ ಸ್ಥಾನ ಪಡೆದಿದ್ದು, ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಅವರು ಯಶ್‌ಗೆ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.
ಅಮೆರಿಕಾದ ನ್ಯೂಯಾರ್ಕ್ ಮೂಲದ ಅಂತರಾಷ್ಟ್ರೀಯ ಜಿ ಕ್ಯೂ ಪುರುಷರ ಮಾಸ ಪತ್ರಿಕೆ, ದಿ ಜಿ ಕ್ಯೂ ಇಂಡಿಯಾ ಮುಂಬೈನಲ್ಲಿ ಕಾರ್ಯಕ್ರಮ ಆಯೋಜಿಸಿತ್ತು. ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ 50 ಅತ್ಯಂತ ಪ್ರಭಾವಶಾಲಿ ಯುವ ಭಾರತೀಯರು ಭಾಗವಹಿಸಿದ್ದರು.
ಈ ಕುರಿತಂತೆ ಯಶ್ ಇನ್’ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿ, ಜಿ ಕ್ಯೂ ಪ್ರಶಸ್ತಿ ಬಂದಿದ್ದಕ್ಕೆ ತುಂಬಾ ಖುಷಿಯಾಗುತ್ತಿದೆ. ಬೇರೆ ಬೇರೆ ಕ್ಷೇತ್ರಗಳಿಂದ ಬಂದ 49 ಸಾಧಕರ ಜೊತೆ ವೇದಿಕೆಯಲ್ಲಿ ಈ ಪ್ರಶಸ್ತಿ ತೆಗದುಕೊಳ್ಳುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತದೆ. ನನಗೆ ಬೆಂಬಲ ನೀಡುತ್ತಿರುವ ಎಲ್ಲಾ ಅಭಿಮಾನಿಗಳಿಗೂ, ಹಿತೈಶಿಗಳಿಗೂ, ಕುಟುಂಬದವರಿಗೂ ಧನ್ಯವಾದ ತಿಳಿಸಿದ್ದಾರೆ.