ಹೊಸ ಪ್ರತಿಭೆಗಳ ‘ಲುಂಗಿ’ ಚಿತ್ರವನ್ನ ನೀವು ಒಮ್ಮೆ ನೋಡಲೇಬೇಕು..!

ಸಿನಿಮಾ: ಬಹುತೇಕ ಹೊಸ ಪ್ರತಿಭೆಗಳಿಂದ ಮೂಡಿಬಂದಿರುವ “ಲುಂಗಿ’ ಚಿತ್ರ ಈ ವಾರ ತೆರೆಗೆ ಬಂದಿದ್ದು ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ.

ನಿರ್ದೇಶಕರಾದ ಅರ್ಜುನ್‌ ಲೂವಿಸ್ ಮತ್ತು ಅಕ್ಷಿತ್ ಶೆಟ್ಟಿ ಚೊಚ್ಚಲ ಪ್ರಯತ್ನದಲ್ಲೇ ತುಂಬ ಸರಳವಾದ ಕಥೆಯನ್ನು ಆಯ್ದುಕೊಂಡಿದ್ದಾರೆ. ಅದನ್ನು ಅಷ್ಟೇ ಸರಳ, ಸುಂದರವಾಗಿ ತೆರೆಗೆ ತಂದಿದ್ದಾರೆ. ಚಿತ್ರಕಥೆಯಲ್ಲಿ ಗಮನಾರ್ಹವಾದ ತಿರುವುಗಳಿಲ್ಲ. ಆದರೆ, ನೋಡಿಸಿಕೊಂಡು ಹೋಗುವ ಗುಣ ಸಿನಿಮಾಕ್ಕಿದೆ. ಸಂಪೂರ್ಣ ಮಂಗಳೂರು ಕನ್ನಡವನ್ನೇ ಪ್ರಧಾನವಾಗಿರಿಸಿಕೊಂಡು ಬರೆದಿರುವ ಸಂಭಾಷಣೆ ‘ಲುಂಗಿ’ ಚಿತ್ರದ ಮತ್ತೊಂದು ಹೈಲೈಟ್‌.

ಕಾಡು, ಮರಗಳ ನಡುವೆ ಅಲ್ಲಲ್ಲಿ ಕಾಣುವ ಬೆರಳೆಣಿಕೆಯ ಮನೆಗಳು, ವಿದೇಶಿ ಕನಸು ಕಾಣುವ ಚಿಗುರು ಮೀಸೆಯ ಹುಡುಗರು, ಮುದ್ದಾಗಿ ಕಾಣುವ ಸುಂದರಿಯರು, ಮಲೆಯಾಳಿ ಸಿನಿಮಾಗಳ ಪ್ರಭಾವವನ್ನೂ ಮೀರಿ ನಿಲ್ಲುವ ಯಕ್ಷಗಾನದ ಘಮಲು, ಫೇಸ್‌ಬುಕ್- ವಾಟ್ಸಪ್ ಯುಗದಲ್ಲೂ ನಮ್ಮ ಸಂಸ್ಕೃತಿ, ನಮ್ಮ ನಾಡು ಎಂದು ಓಡಾಡುತ್ತ ಬೇರೆಯವರಿಗೆ ಅಪರಿಚಿತನಂತೆ ಕಾಣುವ ಕನ್ನಡ ಮೇಸ್ಟ್ರು… ಈ ಎಲ್ಲ ಅಂಶಗಳು ಸೇರಿಕೊಂಡು ‘ಲುಂಗಿ’ ಕತೆಗೆ ದೇಸಿತನ ತಂದು ಕೊಟ್ಟಿವೆ.

ಕಾಲೇಜ್ ಹುಡುಗನೋರ್ವ ಪದವಿ ಮುಗಿಸಿದ ಬಳಿಕ ಕೆಲಸಕ್ಕೆ ಸೇರುವ ಮುನ್ನ ಮನೆಯಲ್ಲೇ ಇರುತ್ತಾನಲ್ಲ? ಅದು ಬಹಳಷ್ಟು ಸಾಮಾನ್ಯರ ಬದುಕಲ್ಲಿ ಸಹಜವಾಗಿ ನಡೆಯುವ ಆತಂಕದ ದಿನಗಳು. ವಿದ್ಯಾರ್ಥಿ ಎಂಬ ಆದರವಿಲ್ಲದೆ, ನಿರುದ್ಯೋಗಿ ಎನ್ನುವ ಆಪಾದನೆಗೆ ಒಳಗಾಗುವ ಕಾಲ. ಅಂತಹ ದಿನಗಳು ಹಾಗೂ ಆತ ಸ್ವಂತದ್ದೊಂದು ಲುಂಗಿ ಉದ್ಯಮವನ್ನು ಆರಂಭಿಸುವ ಘಟನೆಗಳ ಮೂಲಕ ಸಾಗುವ ಚಿತ್ರವೇ ಲುಂಗಿ. ಇದರ ನಡುವೆ ಎರಡು ಪ್ರೇಮ ಕತೆಗಳೂ ಆತನ ಬಾಳಲ್ಲಿ ನಡೆಯುತ್ತವೆ.

ಕಾಲೇಜ್ ಹುಡುಗ ರಕ್ಷಿತ್ ಪಾತ್ರದಲ್ಲಿ ನವನಾಯಕನಾಗಿ ಪ್ರಣವ್ ಹೆಗ್ಡೆ ಚಂದನವನಕ್ಕೆ ಕಾಲಿಟ್ಟಿದ್ದಾರೆ. ನೋಟದಲ್ಲಿ ತುಸು ರಕ್ಷಿತ್ ಶೆಟ್ಟಿಯ ಹೋಲಿಕೆ ಕಂಡು ಬಂದರೂ, ರಕ್ಷಿತ್ ಟ್ರೆಂಡ್ ಮಾಡಿರುವಂತಹ ಮಂಗಳೂರು ಕನ್ನಡದಿಂದಾಗಿ ಪ್ರಣವ್ ಇನ್ನಷ್ಟು ಹೋಲಿಸಲ್ಪಡುತ್ತಾರೆ. ಆದರೆ ಕಾಲೇಜ್ ಹುಡುಗನಾಗಿ ಆಯ್ದುಕೊಂಡಿರುವ ಪಾತ್ರ, ಉಳಿದ ಸಿನೆಮಾ ನಾಯಕರಂತೆ ಪೋಲಿ ಅಲ್ಲದ; ಹೊಡೆದಾಟಕ್ಕಿಳಿಯದ ವಿಭಿನ್ನತೆಯೊಂದಿಗೆ ಸಹಜತೆಗೆ ಸನಿಹವಾಗಿದೆ. ಯಕ್ಷಗಾನ ಇಷ್ಟ ಎನ್ನುವ ನಾಯಕ ಅದಕ್ಕೆ ಪೂರಕವಾಗಿ ಬಣ್ಣದ ವೇಷದೊಂದಿಗೆ ಗಮನ ಸೆಳೆಯುವ ಅವಕಾಶ ಇದ್ದರೂ ಹಾಗೆ ಕಾಣಿಸಿಕೊಳ್ಳದಿರುವುದು, ಡ್ಯುಯೆಟ್‌ಗಾಗಿ ಹಾಡು ಇಲ್ಲದಿರುವುದು ಚಿತ್ರದ ವಿಭಿನ್ನತೆಗಳ ಪಟ್ಟಿಯಲ್ಲಿ ಸೇರುತ್ತದೆ.

ಪ್ರಸಾದ್ ಶೆಟ್ಟಿಯವರ ಅಚ್ಚುಕಟ್ಟಾದ ಹಿನ್ನೆಲೆ ಸಂಗೀತ ಮತ್ತು ನವಿರಾದ ಪ್ರೇಮಗೀತೆ ಚಿತ್ರವನ್ನು ಉತ್ಕೃಷ್ಟಗೊಳಿಸುವಲ್ಲಿ ಸಹಕಾರಿಯಾಗಿದೆ. ಛಾಯಾಗ್ರಹಣ ಕೂಡ ಉತ್ತಮವಾಗಿದೆ.

ಇಬ್ಬರು ನಾಯಕಿಯರಲ್ಲಿ ಲೋಲಿತ ಪಾತ್ರಧಾರಿ ಅಹಲ್ಯಾ ಸುರೇಶ್ ಪಾತ್ರ ಚಿತ್ರ ಮುಗಿದ ಮೇಲೆಯೂ ಕಾಡುತ್ತದೆ. ಉಳಿದಂತೆ ಇತರ ಕಲಾವಿದರು ಕೂಡ ತಮ್ಮ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಚಿತ್ರದ ಇತರೆ ತಾಂತ್ರಿಕ ಕೆಲಸಗಳು ಕೂಡ ಅಚ್ಚುಕಟ್ಟಾಗಿ ಮೂಡಿಬಂದಿದೆ. ಒಟ್ಟಾರೆ ನೋಡುವುದಾದರೆ, ಕೊಟ್ಟ ಕಾಸಿಗೆ ಮೋಸವಿಲ್ಲದೆ “ಲುಂಗಿ’ ಒಂದಷ್ಟು ಮನರಂಜನೆಯಂತೂ ನೀಡುತ್ತದೆ. ಹೊಸ ಪ್ರತಿಭೆಗಳ ಚೊಚ್ಚಲ ಪ್ರಯತ್ನವನ್ನು ಒಮ್ಮೆ ನೋಡಿಬರಬಹುದು.

Scroll to Top