ಬಿಡುಗಡೆ​ಗೂ ಮೊದಲೇ 21 ಪ್ರಶಸ್ತಿಗಳನ್ನು ಬಾಚಿಕೊಂಡ ಕನ್ನಡ ಚಿತ್ರ..!

ಸಿನಿಮಾ: ಕನ್ನಡ ಚಿತ್ರವೊಂದು ಬಿಡುಗಡೆಗೆ ಮುನ್ನವೇ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸಖತ್ ಸದ್ದು ಮಾಡಿದೆ. ‘ಗಂಧದ ಕುಡಿ’ ಹೆಸರಿನ ಈ ಸಿನಿಮಾ ಈಗ ಎಲ್ಲೆಡೆ ಹವಾ ಎಬ್ಬಿಸಿದ್ದು, ಈಗಾಗಲೇ 21 ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ.

ಕನ್ನಡದಲ್ಲಿ ಅನೇಕ ಮಕ್ಕಳ ಸಿನಿಮಾಗಳು ಬಂದಿದೆ. ಇತ್ತೀಚಿನ ದಿನಗಳಲ್ಲಿ ಅಂತಹ ಚಿತ್ರಗಳು ಅಪರೂಪ. ಅಲ್ಲೊಂದು ಇಲ್ಲೊಂದು ಮಕ್ಕಳ ಸಿನಿಮಾ ಬರುತ್ತೆ. ಇದೀಗ ಶೀರ್ಷಿಕೆಯಿಂದಲೇ ಗಮನ ಸೆಳೆಯುತ್ತಿರುವ ಚಿತ್ರ ಗಂಧದ ಕುಡಿ 21 ಪ್ರಶಸ್ತಿಗಳನ್ನು ಬಾಚಿಕೊಂಡು ಭಾರಿ ಸದ್ದು ಮಾಡುತ್ತಿದೆ.

ಕರ್ನಾಟಕದ ಸಹ್ಯಾದ್ರಿ ಸಾಲು. ಪಶ್ಚಿಮ ಘಟ್ಟಗಳಲ್ಲಿ ಉಂಟಾಗುತ್ತಿರುವ ಅರಣ್ಯ ನಾಶ. ಮತ್ತು ಅದರಿಂದ ಆಗುತ್ತಿರುವ ಜಾಗತಿಕ ದುಷ್ಪರಿಣಾವನ್ನೇ ಮುಖ್ಯ ಕಥಾಹಂದರವನ್ನಾಗಿಸಿಕೊಂಡು ಈ ಸಿನಿಮಾ ಮಾಡಲಾಗಿದೆ.

ಹೈದರಾಬಾದ್‌ನಲ್ಲಿ ನಡೆದ ‘ಇಂಡಿಯನ್ ವರ್ಲ್ಡ್ ಫಿಲ್ಮ್ ಫೆಸ್ಟಿವಲ್’ನಲ್ಲಿ ‘ಬೆಸ್ಟ್ ಸಿನಿಮಾಟೋಗ್ರಫಿ ಪ್ರಶಸ್ತಿಯನ್ನು ಈ ಚಿತ್ರವು ತನ್ನದಾಗಿಸಿಕೊಂಡಿದೆ. ಅಷ್ಟೆ ಅಲ್ಲ, ಇನ್ನೂ ಹಲವು ಪ್ರಶಸ್ತಿಗಳನ್ನ ಪಡೆಯುವಲ್ಲಿ ಯಶಸ್ವಿಯಾಗಿರುವ ‘ ಗಂಧದ ಕುಡಿ ‘ ಚಿತ್ರವು ಇದೇ ಮಾರ್ಚ್ 29, 2019ರಂದು ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿದೆ.

ಈ ಸಿನಿಮಾಗೆ ಅಂತರಾಷ್ಟ್ರೀಯ ಮಟ್ಟದಿಂದಲೂ ಮೆಚ್ಚುಗೆಗಳು ವ್ಯಕ್ತವಾಗಿದೆ. ಈಗಾಗಲೇ ಅಮೆರಿಕಾದ ಕ್ಯಾಲಿಫೋರ್ನಿಯಾದ ಸ್ಯಾನ್‍ಡಿಯಾಗೋ ಅಂತಾರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಕೌಟುಂಬಿಕ ಚಲನಚಿತ್ರ ಎಂಬ ಹಿರಿಮೆಗೆ ಪಾತ್ರವಾಗಿದೆ.

ಕೊಲ್ಕತ್ತಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ಅತ್ಯುತ್ತಮ ಚಲನಚಿತ್ರ’, ಹಾಗೂ ಚಿತ್ರದ ಹಿನ್ನೆಲೆ ಸಂಗೀತಕ್ಕಾಗಿ ಪ್ರಸಾದ್ ಕೆ ಶೆಟ್ಟಿ ‘ಅತ್ಯುತ್ತಮ ಹಿನ್ನೆಲೆ ಸಂಗೀತ’ ಪ್ರಶಸ್ತಿಗಳನ್ನು ಪಡೆದಿದೆ. ಕಳೆದ ನವೆಂಬರ್​ನಲ್ಲಿ ಮುಂಬೈಯಲ್ಲಿ ನಡೆದ ‘ಮೂನ್‍ವೈಟ್ ಫಿಲಂಸ್ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ‘ಅತ್ಯುತ್ತಮ ಚಿತ್ರ’, ‘ಅತ್ಯುತ್ತಮ ನಿರ್ದೆಶಕ’ ಪ್ರಶಸ್ತಿ ಸೇರಿದಂತೆ ಪ್ರಶಸ್ತಿಗಳ ಗೊಂಚಲನ್ನೇ ಬಾಚಿಕೊಂಡಿದೆ. ಹೀಗೆ ರಿಲೀಸ್ ಮೊದಲೇ ಒಂದು ಚಿತ್ರ 21 ಪ್ರಶಸ್ತಿಗಳನ್ನ ಮುಡಿಗೇರಿಸಿಕೊಂಡಿರುವುದು ಕನ್ನಡದಲ್ಲಿ ಇದೇ ಪ್ರಥಮ ಎನ್ನಬಹುದು.

ಹಿಂದಿಯಲ್ಲೂ ಈ ಚಿತ್ರ ಬಿಡುಗಡೆಯಾಗುತ್ತಿದ್ದು, ಚಿತ್ರಕ್ಕೆ ‘ಚಂದನ್ವನ್’ ಎಂಬ ಹೆಸರಿಡಲಾಗಿದೆ. ಇನ್ನು ಈ ಚಿತ್ರವನ್ನು ಬಾಲಿವುಡ್ ಸೂಪರ್ ಹಿಟ್ ‘ಮಂಗಲ್ ಪಾಂಡೆ’, ‘ಜೋಧಾ ಅಕ್ಬರ್’ ಚಿತ್ರಗಳ ಕಲಾ ವಿಭಾಗದಲ್ಲಿ ಕೆಲಸ ಮಾಡಿ ಅನುಭವವಿರುವ ಸಂತೋಷ್ ಕಟೀಲ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಇದು ಅವರ ಎರಡನೇ ಚಿತ್ರವಾಗಿದ್ದು, ಇದಕ್ಕೂ ಮುನ್ನ ‘ಕನಸು ಕಣ್ಣು ತೆರೆದಾಗ ‘ ನಿರ್ದೇಶಿಸಿದ್ದರು. ಈ ಚಿತ್ರ ಕೂಡ ಅಂತಾರಾಷ್ಟ್ರೀಯ ಪ್ರಶಸ್ತಿ ಬಾಚಿಕೊಂಡಿತ್ತು.

ಆದರೆ, ಈ ಚಿತ್ರವನ್ನು ನಿರ್ದೇಶಿಸಿದ್ದ ಸಂತೋಷ್ ಕಟೀಲ್ ಇಂದು ನಮ್ಮೊಂದಿಗಿಲ್ಲ. ಗಂಧದ ಕುಡಿ ಚಿತ್ರ ತೆರೆಗೆ ಬರುವ ಮುನ್ನವೇ ಅವರು ಎಲ್ಲರನ್ನು ಅಗಲಿದ್ದಾರೆ. ವರ್ಷದ ಹಿಂದೆ ಚಿತ್ರೀಕರಣದ ವೇಳೆ ಎರ್ಮಾಸ್ ಫಾಲ್ಸ್​ಗೆ ಜಾರಿ ಬಿದ್ದು ಸಂತೋಷ್ ಸಾವಿಗೀಡಾಗಿದ್ದರು.

Scroll to Top