ಬೆಂಗಳೂರು: ಜೋಡಿಹಕ್ಕಿ ಸೀರಿಯಲ್ ಮೂಲಕ ರಾಮಣ್ಣ ಎಂದೇ ಖ್ಯಾತರಾಗಿರುವವರು ತಾಂಡವ್. ಅವರೀಗ ಒಂದು ಕಥೆ ಹೇಳ್ಲಾ ಎಂಬ ವಿನೂತನ ಪ್ರಯೋಗದ ಹಾರರ್ ಚಿತ್ರವೊಂದರ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಹೊಸ ಥರದ ಪೋಸ್ಟರ್ ಸೇರಿದಂತೆ ನಾನಾ ರೀತಿಯಲ್ಲಿ ಈ ಸಿನಿಮಾ ಸುದ್ದಿ ಕೇಂದ್ರದಲ್ಲಿದೆ. ಇದೀಗ ಇದರ ಟ್ರೈಲರ್ ಹೊರ ಬಂದಿದೆ. ಇದುವೇ ಕ್ಷಣ ಕ್ಷಣವೂ ಬೆಚ್ಚಿ ಬೆರಗಾಗಿಸುವಂಥಾ ಡಿಫರೆಂಟಾದ ಕಂಟೆಂಟು ಈ ಚಿತ್ರದಲ್ಲಿದೆ ಎಂಬಂಥಾ ಸುಳಿವನ್ನೂ ಬಿಟ್ಟುಕೊಟ್ಟಿದೆ.
ಕ್ರೌಡ್ ಫಂಡಿಂಗ್ ಮೂಲಕ ನಿರ್ಮಾಣಗೊಂಡಿರೋ ಈ ಚಿತ್ರವನ್ನು ಗಿರೀಶ್ ನಿರ್ದೇಶನ ಮಾಡಿದ್ದಾರೆ. ಈಗ ಹೊರ ಬಂದಿರೋ ಟ್ರೈಲರ್ ಅಂತೂ ಬಹು ಬೇಗನೆ ಪ್ರತೀ ವರ್ಗದ ಪ್ರೇಕ್ಷಕರನ್ನೂ ಕೂಡಾ ತನ್ನತ್ತ ಸೆಳೆದುಕೊಂಡಿದೆ. ಅದ್ಭುತವಾದ ಕಥೆಯೊಂದು ಒಂದು ಕಥೆ ಹೇಳ್ಲಾ ಚಿತ್ರದಲ್ಲಿ ಅಡಕವಾಗಿದೆ ಎಂಬ ವಿಚಾರವನ್ನಂತೂ ಈ ಟ್ರೈಲರ್ ರವಾನಿಸಿದೆ.
ಟ್ರೈಲರ್ ನೋಡಿ:
ಇದು ಹಾರರ್ ಚಿತ್ರ. ಹಾಗೆಂದಾಕ್ಷಣ ಮಾಮೂಲಿ ಮೆಥಡ್ಡಿನ ಸಿನಿಮಾ ಎಂದು ಖಂಡಿತಾ ಅಂದುಕೊಳ್ಳುವಂತಿಲ್ಲ. ಇದು ತಾಜಾತನದಿಂದ, ಸಾಕಷ್ಟು ನವೀನ ಪ್ರಯೋಗಗಳಿಂದಲೇ ರೂಪುಗೊಂಡಿದೆ. ಇಲ್ಲಿರೋದು ಒಂದು ಕಥೆಯಲ್ಲ. ಬದಲಾಗಿ ಒಂದೇ ಚಿತ್ರದಲ್ಲಿ ಐದು ಬೇರೆ ಬೇರೆ ಹಾರರ್ ಕಥೆಗಳನ್ನು ಹೇಳೋ ಸಾಹಸಕ್ಕೆ ನಿರ್ದೇಶಕರು ಕೈ ಹಾಕಿದ್ದಾರೆ. ಈ ಐದೂ ಕಥೆಗಳ ದಿಕ್ಕೂ ಬೇರೆ ಬೇರೆ. ಅದರಲ್ಲೊಂದಷ್ಟು ಸತ್ಯ ಘಟನೆಗಳನ್ನ ಆಧರಿಸಿದವುಗಳಂತೆ. ಆದರೆ ಇವೆಲ್ಲವೂ ಕ್ಲೈಮ್ಯಾಕ್ಸ್ ಹೊತ್ತಿಗೆ ಒಂದಕ್ಕೊಂದು ಕನೆಕ್ಟ್ ಆಗುತ್ತವಂತೆ.
ಬಹುತೇಕ ಹೊಸಬರೇ ಸೇರಿಕೊಂಡು ಈ ಚಿತ್ರವನ್ನ ರೂಪಿಸಿದ್ದಾರೆ. ಈಗಾಗಲೇ ಈ ಸಿನಿಮಾ ಪೋಸ್ಟರ್‍ಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಟ್ರೈಲರ್ ಮೂಲಕ ಆ ಬಿಸಿ ಮತ್ತಷ್ಟು ಏರಿಕೊಂಡಿದೆ.
Source: https://publictv.in