ಸೂರತ್: ಗುಜರಾತ್ ನ ಸೂರತ್ ನಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ವೊಂದರ ಕೋಚಿಂಗ್ ಸೆಂಟರ್ ನಲ್ಲಿ ಶುಕ್ರವಾರ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ 15 ವಿದ್ಯಾರ್ಥಿಗಳ ಮೃತಪಟ್ಟಿದ್ದಾರೆ.
ಇಲ್ಲಿನ ಸಾರ್ಥನಾ ಬಡಾವಣೆಯಲ್ಲಿರುವ ಶಾಪಿಂಗ್ ಕಾಂಪ್ಲೆಕ್ಸ್ನ 2ನೇ ಮಹಡಿಯಲ್ಲಿ ಹೊತ್ತಿಕೊಂಡ ಬೆಂಕಿ, ನಾಲ್ಕನೇ ಮಹಡಿಯಲ್ಲಿದ್ದ ಕೋಚಿಂಗ್ ಸೆಂಟರ್ಗೆ ವ್ಯಾಪಿಸಿ 15 ಮಂದಿ ಸಾವನ್ನಪ್ಪಿದ್ದು ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೆಂಕಿಯ ಕೆನ್ನಾಲಗೆಯಿಂದ ತಪ್ಪಿಸಿಕೊಳ್ಳಲು ಹಲವರು ಕಟ್ಟಡದ ಮೇಲ್ಛಾವಣಿಯಿಂದ ಹಾರಿದ್ದು, ಈ ದೃಶ್ಯಗಳು ಭೀತಿ ಹುಟ್ಟಿಸುವಂತಿದೆ.
ಸ್ಥಳಕ್ಕೆ 16 ಅಗ್ನಿಶಾಮಕ ವಾಹನಗಳು ಆಗಮಿಸಿದ್ದು, ಕಟ್ಟಡದಲ್ಲಿದ್ದ 50ಕ್ಕೂ ಹೆಚ್ಚು ಮಕ್ಕಳನ್ನು ರಕ್ಷಿಸಲಾಗಿದೆ. ಅಲ್ಲದೆ ಕಟ್ಟಡದಲ್ಲಿ ಇನ್ನೂ ಹಲವರು ಸಿಲುಕಿಕೊಂಡಿರುವ ಸಾಧ್ಯತೆ ಇದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.