ಪತ್ರಕರ್ತ ಕ್ಲಿಕ್ಕಿಸಿದ ಈ ಫೋಟೋದಿಂದ ಉಗ್ರ ಕಸಬ್‍ಗೆ ಗಲ್ಲು: ದಾಳಿ ಬಗ್ಗೆ ಫೋಟೋಗ್ರಾಫರ್ ಮಾತು

ಮುಂಬೈ: ಇಂದಿಗೆ ಮುಂಬೈನಲ್ಲಿ ದಾಳಿ ಆಗಿ 11 ವರ್ಷ. ಈ ಘಟನೆಯಲ್ಲಿ 166 ಮಂದಿ ಮೃತಪಟ್ಟಿದ್ದು, 300ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ಸಿಕ್ಕಿಬಿದ್ದ ಉಗ್ರ ಅಜ್ಮಲ್ ಕಸಬ್‍ನನ್ನು 2012ರಲ್ಲಿ ಗಲ್ಲಿಗೇರಿಸಲಾಗಿತ್ತು. ಉಗ್ರ ಕಸಬ್‍ನನ್ನು ಗಲ್ಲಿಗೇರಿಸುವಲ್ಲಿ ಪತ್ರಕರ್ತರೊಬ್ಬರು ಕ್ಲಿಕ್ಕಿಸಿದ ಫೋಟೋವೊಂದು ಮುಖ್ಯ ಪಾತ್ರವಹಿಸಿತ್ತು.

2008, ನವೆಂಬರ್ 28ರಂದು ಮುಂಬೈನ ತಾಜ್ ಹೋಟೆಲ್‍ಗೆ ಉಗ್ರರು ನುಗ್ಗಿ ದಾಳಿ ಮಾಡಿದ್ದರು. ಅಂದು ಮುಂಬೈನಲ್ಲಿ ಫೈರಿಂಗ್ ಶಬ್ದ ಕೇಳಿಸುತ್ತಿತ್ತು. ಜನರನ್ನು ಮನೆಗಳಲ್ಲಿಯೇ ಬಂಧಿಸಲಾಗುತ್ತಿತ್ತು. ಪೊಲೀಸರ ವಾಹನ, ಅಂಬುಲೆನ್ಸ್ ಹಾಗೂ ಅಗ್ನಿಶಾಮಕ ವಾಹನದ ಸೈರನ್ ಶಬ್ದ ಪ್ರತಿ ಬೀದಿಗಳಲ್ಲಿ ಕೇಳಿಸುತಿತ್ತು. ಉಗ್ರರು ಹೋಟೆಲ್‍ಗೆ ನುಗ್ಗಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆ ಪತ್ರಕರ್ತರು ಘಟನೆಯ ದೃಶ್ಯವನ್ನು ಸೆರೆ ಹಿಡಿಯುತ್ತಿದ್ದರು. ಅದರಲ್ಲಿ ಫೋಟೋ ಜರ್ನಲಿಸ್ಟ್ ಸೆಬಾಸ್ಟಿಯನ್ ಡಿಸೋಜಾ ಕೂಡ ಒಬ್ಬರು.

ಸೆಬಾಸ್ಟಿಯನ್ ಡಿಸೋಜಾ ರೈಲ್ವೆ ನಿಲ್ದಾಣದ ಬಳಿಯಿರುವ ತಮ್ಮ ಕಚೇರಿಯಲ್ಲಿ ಇದ್ದರು. ಉಗ್ರರು ದಾಳಿ ನಡೆಸಿದ್ದಾರೆ ಎಂಬ ವಿಷಯ ತಿಳಿದ ತಕ್ಷಣ ಯಾವುದೇ ರಕ್ಷಣೆ ಇಲ್ಲದೆ ಫೋಟೋ ಕ್ಲಿಕ್ಕಿಸಲು ತಮ್ಮ ಕ್ಯಾಮೆರಾ ಹಾಗೂ ಲೆನ್ಸ್ ತೆಗೆದುಕೊಂಡು ಹೋಗಿದ್ದರು. ಸೆಬಾಸ್ಟಿಯನ್ ಅವರನ್ನು ‘ಸೇಬಿ’ ಎಂದು ಗುರುತಿಸುತ್ತಾರೆ. ಅವರು ಕ್ಲಿಕ್ಕಿಸಿದ ಫೋಟೋ ಹಾಗೂ ಸಾಕ್ಷ್ಯಗಳು 26/11 ಪ್ರಕರಣದ ವಿಚಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಈ ಸಾಕ್ಷಿಗಳಿಂದ 2012ರಲ್ಲಿ ಕಸಬ್‍ನನ್ನು ಗಲ್ಲಿಗೇರಿಸಲಾಯಿತು.

ಸೇಬಿ 2012ರಲ್ಲಿ ನಿವೃತ್ತಿ ಪಡೆದಿದ್ದು, ಈಗ ಅವರು ಗೋವಾದಲ್ಲಿ ವಾಸಿಸುತ್ತಿದ್ದಾರೆ. ಈ ಘಟನೆಯನ್ನು ಮರೆಯಬೇಕು ಎಂದು ಸೇಬಿ ಹೇಳುತ್ತಾರೆ. ಅಲ್ಲದೆ ನಾನು ಪ್ಲಾಟ್‍ಫಾರಂನಲ್ಲಿ ನಿಂತಿದ್ದ ರೈಲಿನ ಬೋಗಿ ಬಳಿ ಓಡಿ ಹೋಗಿ ಫೋಟೋ ಕ್ಲಿಕ್ಕಿಸಲು ಯತ್ನಿಸಿದೆ. ಆದರೆ ನನಗೆ ಅಲ್ಲಿ ಸರಿಯಾಗಿ ಫೋಟೋ ಕ್ಲಿಕ್ಕಿಸಲು ಆಗಲಿಲ್ಲ. ಆಗ ನಾನು ಮತ್ತೊಂದು ಬೋಗಿಗೆ ಹೋಗಿ ಉಗ್ರರಿಗಾಗಿ ಕಾಯುತ್ತಿದ್ದೆ. ಫೋಟೋ ಕ್ಲಿಕ್ಕಿಸಲು ನನಗೆ ಕೇವಲ ಸ್ವಲ್ಪ ಸಮಯ ಮಾತ್ರವಿತ್ತು. ನನ್ನ ಪ್ರಕಾರ ಉಗ್ರರು ನಾನು ಫೋಟೋ ಕ್ಲಿಕ್ಕಿಸಿದನ್ನು ನೋಡಿದ್ದಾರೆ. ಆದರೆ ಅವರು ಅಷ್ಟು ಗಮನ ಹರಿಸಲಿಲ್ಲ ಎಂದರು.

ಎಕೆ-47 ರೈಫಲ್ ಹಿಡಿದು ನಿಂತಿದ್ದ ಕಸಬ್‍ನ ಫೋಟೋವನ್ನು ಹತ್ತಿರದಿಂದ ಕ್ಲಿಕ್ಕಿಸಿದ ಸೇಬಿ ಅವರಿಗೆ ‘ವಲ್ರ್ಡ್ ಪ್ರೆಸ್ ಫೋಟೋ’ ಪ್ರಶಸ್ತಿ ನೀಡಿ ಗೌರವಿಸಿತ್ತು. ಸೇಬಿ ಈ ಫೋಟೋವನ್ನು ಚತ್ರಪತಿ ಶಿವಾಜಿ ಟರ್ಮಿನಲ್ ಬಳಿ ಕ್ಲಿಕ್ಕಿಸಿದ್ದಾರೆ. ಆ ಘಟನೆ ಬಗ್ಗೆ ನೆನಪಿಸಿಕೊಂಡು ಮಾತನಾಡಿದ ಸೇಬಿ, “ಆ ದಿನ ರೈಲ್ವೆ ನಿಲ್ದಾಣದಲ್ಲಿದ್ದ ಪೊಲೀಸ್ ಅಧಿಕಾರಿ ಕಸಬ್‍ನನ್ನು ಶೂಟ್ ಮಾಡಿದ್ದರೆ ಇಷ್ಟು ಜನ ಮೃತಪಡುತ್ತಿರಲಿಲ್ಲ” ಎಂದು ತಿಳಿಸಿದ್ದಾರೆ.

ಕೃಪೆ: ಪಬ್ಲಿಕ್ ಟಿವಿ

Scroll to Top