ನೇಪಾಳ: ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದವರಿಗೇ ಗೊತ್ತು ಅದರ ಹಿಂಸೆ. ಅಂದಹಾಗೆ ಮೌಂಟ್ ಎವರೆಸ್ಟ್‌ನ ತುದಿಯಲ್ಲೂ ಟ್ರಾಫಿಕ್ ಜಾಮ್ ಆಗುತ್ತದೆ ಎಂದರೆ ಅಚ್ಚರಿಯಾಗುವುದು ಖಂಡಿತಾ.
ಹೌದು. ವಿಶ್ವದ ಅತ್ಯುನ್ನತ ಶಿಖರ ಮೌಂಟ್ ಎವರೆಸ್ಟ್ ಜನಜಂಗುಳಿಯಿಂದ ಕೂಡಿದೆ. ಜನಜಂಗುಳಿಯಿಂದಾಗಿ ಆರೋಹಿಗಳ ಸುಗಮ ಚಲನವಲನಗಳಿಗೆ ತಡೆಯಾಗುತ್ತಿದ್ದು ಅವರು ಬಳಲಿಕೆಯಿಂದಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಪರ್ವತಾರೋಹಣ ಮಾಡಿದ ಮೂವರು ಭಾರತೀಯ ಆರೋಹಿಗಳು ಮೃತರಾಗಿದ್ದು, ಒಂದೇ ವಾರದಲ್ಲಿ ಮೃತಪಟ್ಟವರ ಸಂಖ್ಯೆ 7ಕ್ಕೇರಿದೆ ಎಂದು ಆರೋಹಣ ಸಂಘಟಕರು ಮತ್ತು ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ. ಇದರೊಂದಿಗೆ ಈ ಬಾರಿಯ ಆರೋಹಣ ಋತುವಿನಲ್ಲಿ ಮೃತಪಟ್ಟವರ ಹಾಗೂ ನಾಪತ್ತೆಯಾದವರ ಸಂಖ್ಯೆ 15ಕ್ಕೇರಿದೆ.
ಇನ್ನು ಈ ಬಾರಿ ನೇಪಾಳ ದಾಖಲೆಯ 381 ಪರ್ಮಿಟ್‌ಗಳನ್ನು ಆರೋಹಿಗಳಿಗೆ ನೀಡಿದ್ದು, ನೇಪಾಳವು ಎವರೆಸ್ಟ್ ಆರೋಹಣದ ಪ್ರತಿ ಪರ್ಮಿಟ್‌ಗೆ 11,000 ಡಾಲರ್ (ಸುಮಾರು 7.65 ಲಕ್ಷ ರೂಪಾಯಿ) ಶುಲ್ಕ ವಿಧಿಸುತ್ತಿದೆ. ಕೆಟ್ಟ ಹವಾಮಾನದಿಂದಾಗಿ ಆರೋಹಣ ದಿನಗಳನ್ನು ಕಡಿತಗೊಳಿಸಿದ ಬಳಿಕ, ಎವರೆಸ್ಟ್ ದಾರಿಯುದ್ದಕ್ಕೂ ಜನರೇ ತುಂಬಿದ್ದಾರೆ.
ಭಾರತದ ಅನುಭವಿ ಪರ್ವತಾರೋಹಿ 52 ವರ್ಷದ ಕಲ್ಪನಾ ದಾಸ್ ಎಂಬುವವರು ಎಚರೆಸ್ಟ್ ತುದಿ ತಲುಪಿದ ನಂತರ ಹಿಂದಿರುಗುವಾಗ ಹತ್ತುವ ಮತ್ತು ಇಳಿಯುವವರ ಸಂಖ್ಯೆ ಹೆಚ್ಚಾಗಿ ಮಾರ್ಗದಲ್ಲೇ 26,247 ಅಡಿಗಳ ಎತ್ತರದ ಸ್ಥಳದಲ್ಲಿ ಗಂಟೆಗಳ ಕಾಲ ಕಾಯುವಂತಾಗಿ ಕೊನೆಯುಸಿರೆಳೆದಿದ್ದಾರೆ. ಇದೇ ವೇಳೆ ಅಂಜಲಿ ಕುಲಕರ್ಣಿ (55) ಎಂಬುವವರೂ ಮೃತಪಟ್ಟಿರುವುದಾಗಿ ವರದಿಯಾಗಿದೆ. ಅಲ್ಲದೆ 27 ವರ್ಷದದ ಭಾರತೀಯ ಯುವಕನೊಬ್ಬ ಕೂಡ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ದಣಿವಿನಿಂದಾಗಿ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಇದೇ ಸಂದರ್ಭದಲ್ಲಿ ಪರ್ವತಾರೋಹಣದಲ್ಲಿ ತೊಡಗಿದ್ದ ನೇಪಾಳ ಮೂಲದ ಶೆರ್ಪಾ ಒಬ್ಬರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಫೋಟೊಗಳನ್ನು ಪ್ರಕಟಿಸಿದ್ದು, ಬುಧವಾರ ಬೆಳಗ್ಗೆ 320ಕ್ಕೂ ಹೆಚ್ಚು ಜನ ಏಕಕಾಲದಲ್ಲಿ ಎವರೆಸ್ಟ್ ತುದಿ ತಲುಪಿದರಿಂದ ಭಾರಿ ಟ್ರಾಫಿಕ್ ಜಾಮ್ ಸಂಭವಿಸಿತ್ತು ಎಂದು ಬರೆದಿದ್ದಾರೆ.