ಮಲಯಾಳ ಕವಿ ಅಕ್ಕಿತಂಗೆ ಜ್ಞಾನಪೀಠ ಪ್ರಶಸ್ತಿ

ನವದೆಹಲಿ: ಮಲಯಾಳದ ಪ್ರಸಿದ್ಧ ಕವಿ, ಅಕ್ಕಿತ್ತಂ ಎಂದೇ ಪ್ರಸಿದ್ಧರಾಗಿರುವ ಅಚ್ಯುತನ್‌ ನಂಬೂದಿರಿ (93) ಅವರು ಈ ವರ್ಷದ ಜ್ಞಾನಪೀಠ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ದೆಹಲಿಯಲ್ಲಿ ನಡೆದ ಹಿರಿಯ ಒಡಿಯಾ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ.ಪ್ರತಿಭಾ ರೇ ಅವರ ಅಧ್ಯಕ್ಷತೆಯ ಕೇಂದ್ರೀಯ ಆಯ್ಕೆ ಸಮಿತಿ ಸಭೆಯಲ್ಲಿ ಅಕ್ಕಿತಂ ಅವರನ್ನು ಆಯ್ಕೆ ಮಾಡಲಾಗಿದೆ. ಈ ಸಮಿತಿಯಲ್ಲಿ ದೇಶದ ನಾನಾ ಭಾಷೆಗಳ 23 ಸಾಹಿತಿಗಳಿದ್ದಾರೆ. ಕನ್ನಡದ ಪ್ರತಿನಿಧಿಯಾಗಿ ಜೆ.ಎನ್‍.ಯು ಕನ್ನಡ ಪೀಠದ ನಿರ್ದೇಶಕರಾದ ಡಾ.ಪುರುಷೋತ್ತಮ ಬಿಳಿಮಲೆ ಅವರಿದ್ದಾರೆ. ಕರ್ನಾಟಕದಿಂದ ಎಂ.ವೀರಪ್ಪ ಮೊಯ್ಲಿ, ಕಮಲಾ ಹಂಪನಾ ಹಾಗೂ ಮೈಸೂರಿನ ಲೇಖಕಿ ಲತಾ ರಾಜಶೇಖರ್‍ ಅವರ ಹೆಸರುಗಳನ್ನು ಶಿಫಾರಸು ಮಾಡಲಾಗಿತ್ತು.

ಅಕ್ಕಿತಂ ಅವರು ಜ್ಞಾನಪೀಠ ಪುರಸ್ಕಾರ ಸ್ವೀಕರಿಸಲಿರುವ 6ನೇ ಮಲೆಯಾಳಂ ಸಾಹಿತಿಯಾಗಿದ್ದಾರೆ. 1965ರಲ್ಲಿ ಜಿ.ಎಸ್. ಕುರುಪ್, 1980ರಲ್ಲಿ ಎಸ್.ಕೆ. ಪೊಟ್ಟೆಕಾಡ್, 1984ರಲ್ಲಿ ಥಕಾಯಿ ಶಿವಶಂಕರ ಪಿಳ್ಳೈ, 1995ರಲ್ಲಿ ಎಂ.ಟಿ. ವಾಸುದೇವನ್ ನಾಯರ್ ಹಾಗೂ 2007ರಲ್ಲಿ ಓ ಎನ್ ವಿ ಕುರುಪ್ ಜ್ಞಾನ ಪೀಠ ಪ್ರಶಸ್ತಿಗೆ ಭಾಜನರಾಗಿದ್ದರು.

1926ರ ಮಾರ್ಚ್ 18 ರಂದು ಪಾಲಕ್ಕಾಡ್ ಜಿಲ್ಲೆಯ ಕುಮರನಲ್ಲೂರ್ ಸಮೀಪ ಅಮೆಟ್ಟಿಕರದಲ್ಲಿ ಎಎಎಂ ವಾಸುದೇವನ್ ನಂಬೂದರಿ ಹಾಗೂ ಸಿ.ಎಂ ಪಾರ್ವತಿ ಅಂಥರಾಜನಂ ದಂಪತಿಗೆ ಜನಿಸಿದ ಅಕ್ಕಿತಂ ಮಲೆಯಾಳಂ ಸಾಹಿತ್ಯದಲ್ಲಿ ಅತ್ಯಂತ ಸರಳ ಹಾಗೂ ಓದುಗರು ಸುಲಭವಾಗಿ ಗ್ರಹಿಸುವ ಬರವಣಿಗೆಗೆ ಹೆಸರುವಾಸಿಯಾಗಿದ್ದಾರೆ.

ಕೇರಳ ಸಾಹಿತ್ಯಕ್ಕೆ ಹೊಸ ಚೈತನ್ಯ ತಂದುಕೊಟ್ಟ ಅಕ್ಕಿತಂ ಅವರ ಇರುಪತ್ತಂ ನೂತಂತಿತೆ ಇತಿಹಾಸಂ, ಬಲಿ ದರ್ಶನಂ, ಧರ್ಮ ಸೂರ್ಯನ್ ಸೇರಿ ಹಲವಾರು ಕೃತಿಗಳು ಖ್ಯಾತಿ ಗಳಿಸಿವೆ. ಪದ್ಮಶ್ರೀ ಪ್ರಶಸ್ತಿ, ಅಖಿಲ ಕೇರಳ ಇಜುತಚಂ ಸಮಾಜಂ ಪ್ರಶಸ್ತಿಗಳು ಅಕ್ಕಿತಂಗೆ ಸಂದಿವೆ.

ಜ್ಞಾನಪೀಠ ಪ್ರಶಸ್ತಿ ಪಡೆದ ಮಲಯಾಳಿ ಸಾಹಿತಿಗಳು: ಜಿ. ಶಂಕರ ಕುರುಪ್, ಎಸ್.ಕೆ. ಪೊಟ್ಟಕ್ಕಾಡ್, ತಕಳಿ ಶಿವಶಂಕರ ಪಿಳ್ಳೆ, ಎಂ.ಟಿ. ವಾಸುದೇವನ್ ನಾಯರ್ ಮತ್ತು ಒ.ಎನ್.ವಿ. ಕುರುಪ್.

Leave a Comment

Scroll to Top