ಬೆಂಗಳೂರು: ಚಂದ್ರನ ಅಧ್ಯಯನಕ್ಕೆ ಭಾರತ ಕಳುಹಿಸಿರುವ ಚಂದ್ರಯಾನ-2 ನೌಕೆ, ಯಶಸ್ವಿಯಾಗಿ ಚಂದ್ರನ ಕಕ್ಷೆ ತಲುಪಿದೆ ಎಂದು ಇಸ್ರೋ ಪ್ರಕಟಿಸಿದೆ.
ಇಂದು ಭಾರತೀಯರ ಪಾಲಿಗೆ ವಿಶೇಷ ದಿನ. ತಿಂಗಳ ಹಿಂದೆ ಆಗಸಕ್ಕೆ ನೆಗೆದಿದ್ದ ಚಂದ್ರಯಾನ 2 ನೌಕೆ ಬೆಳಗ್ಗೆ 8.30-9.30ರ ಅವಧಿಯಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಚಂದ್ರಯಾನ 2 ಉಪಗ್ರಹವನ್ನು ಚಂದ್ರನ ಕಕ್ಷೆಗೆ ಸೇರಿಸುವ ಕೆಲಸ ಮಾಡಿದೆ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ತಿಳಿಸಿದ್ದರು.
ಕಕ್ಷೆ ಬದಲಾವಣೆಯ ಮೊದಲ ಹಂತ ಇಂದು ನಡೆದಿದೆ. ಚಂದ್ರನ ಅಂಗಳಕ್ಕೆ ತಲುಪಲು ಇನ್ನೂ ನಾಲ್ಕು ಕಾರ್ಯಾಚರಣೆ ನಡೆಯಬೇಕಿದೆ. ಜಿಎಸ್ಎಲ್ವಿ-MkIII-M1 ರಾಕೆಟ್ ನಭಕ್ಕೆ ಜುಲೈ 22ರಂದು ಗಗನಕ್ಕೆ ಹಾರಿತ್ತು. ಸೆಪ್ಟೆಂಬರ್ 7ರಂದು ಚಂದ್ರನ ಅಂಗಳಕ್ಕೆ ಈ ಉಪಗ್ರಹ ತಲುಪಲಿದೆ ಎಂದು ತಿಳಿಸಿದರು.
ಚಂದ್ರನ ದಕ್ಷಿಣ ಧ್ರುವಕ್ಕೆ ಅಡಿ ಇಡುತ್ತಿರುವ ವಿಶ್ವದ ಮೊದಲ ಮೂನ್ ಮಿಷನ್ ಇದಾಗಿದೆ ಎಂಬುದು ಮೊದಲ ಗಮನಾರ್ಹ ಸಾಧನೆ. ಹಾಗೆಯೇ, ಭಾರತ ತನ್ನ ದೇಶೀಯ ತಂತ್ರಜ್ಞಾನದ ಸಹಾಯದಿಂದ ಚಂದ್ರನ ಮೇಲೆ ಅಡಿ ಇಡುತ್ತಿರುವುದು ಇದೇ ಮೊದಲು. ಚಂದ್ರನ ಮೇಲೆ ಅಡಿ ಇಡುವ ವಿಶ್ವದ ನಾಲ್ಕನೇ ರಾಷ್ಟ್ರ ಭಾರತವಾಗಿದೆ.