ಚೀನಾ ಬಂಡವಾಳದ ‘ಬಲೆ’ಯಲ್ಲಿ ಭಾರತ..!

ಚೀನಾ ದೇಶಕ್ಕೆ ತನ್ನ ಮಹತ್ವಾಕಾಂಕ್ಷೆಯ ಬೆಲ್ಟ್‌ ಅಂಡ್‌ ರೋಡ್‌ ಯೋಜನೆಗೆ (ಬಿಆರ್‌ಐ) ಭಾರತದಿಂದ ಸಹಿ ಹಾಕಿಸಲು ಸಾಧ್ಯವಾಗಿಲ್ಲ ಎನ್ನುವುದೇನೋ ನಿಜ. ಆದರೆ, ಭಾರತದ ಸ್ಟಾರ್ಟ್‌ ಅಪ್‌ ಕಂಪನಿಗಳಲ್ಲಿ ಭಾರಿ ಪ್ರಮಾಣದ ಬಂಡವಾಳ ಹೂಡುವ ಮೂಲಕ ಇಲ್ಲಿನ ಅರ್ಥವ್ಯವಸ್ಥೆಯೊಳಗೆ ಒಳದಾರಿ ಹುಡುಕಿ ನುಸುಳಿಕೊಂಡು ಬರುವಲ್ಲಿ ಅದು ಯಶಸ್ವಿಯಾಗಿದೆ.

ಕಳೆದ ಐದು ವರ್ಷಗಳಲ್ಲಿ ಭಾರತೀಯ ತಂತ್ರಜ್ಞಾನ ಕ್ಷೇತ್ರವನ್ನು ಬಹುಪಾಲು ಆವರಿಸಿಕೊಂಡಿರುವ ಚೀನಾ, ಸ್ಟಾರ್ಟ್‌ ಅಪ್‌ ಕಂಪನಿಗಳಲ್ಲಿ 400 ಕೋಟಿ ಡಾಲರ್‌ (₹ 30,400 ಕೋಟಿ) ಹೂಡಿಕೆ ಮಾಡಿದೆ. ಭಾರತೀಯ ಉಪಖಂಡದ ಅರ್ಥವ್ಯವಸ್ಥೆಯಲ್ಲಿ ಅದು ಹೇಗೆ ತೂರಿಕೊಂಡು ಬಂದಿದೆ ಎಂದರೆ 2020ರ ಮಾರ್ಚ್‌ಗೆ ಕೊನೆಗೊಂಡ ಹಿಂದಿನ ಐದು ವರ್ಷಗಳಲ್ಲಿ, ಸ್ಥಾಪನೆಯಾದ 30 ಅತ್ಯಂತ ಯಶಸ್ವಿ ನವೋದ್ಯಮಗಳ ಪೈಕಿ 18ರಲ್ಲಿ ಆ ದೇಶದ ಸಂಸ್ಥೆಗಳೇ ಬಂಡವಾಳ ಹೂಡಿಕೆ ಮಾಡಿವೆ.

ಚೀನಾದ ಟಿಕ್‌ ಟಾಕ್‌ ವಿಡಿಯೊ ಆ್ಯಪ್‌ ಭಾರತದಲ್ಲಿ 20 ಕೋಟಿ ಬಳಕೆದಾರರನ್ನು ಹೊಂದಿದ್ದು, ಯುಟ್ಯೂಬ್‌ಅನ್ನು ಹಿಂದಕ್ಕೆ ಹಾಕಿದೆ. ಅಲ್ಲಿನ ಅಲಿಬಾಬಾ, ಟೆನ್‌ಸೆಂಟ್‌, ಬೈಟ್‌ಡಾನ್ಸ್‌ ಸಂಸ್ಥೆಗಳು, ಅಮೆರಿಕದ ಫೇಸ್‌ಬುಕ್‌, ಅಮೆಜಾನ್‌ ಮತ್ತು ಗೂಗಲ್‌ ಸಂಸ್ಥೆಗಳಿಗೆ ಸಡ್ಡು ಹೊಡೆದಿವೆ. ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿರುವ ಸ್ಮಾರ್ಟ್‌ ಫೋನ್‌ಗಳು ಮತ್ತು ಅವುಗಳ ಅಪ್ಲಿಕೇಶನ್‌ಗಳ (ಆ್ಯಪ್‌) ಮೂಲಕ ಇಲ್ಲಿನ ಆನ್‌ಲೈನ್‌ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿಬಿಟ್ಟಿದೆ ಚೀನಾ. ಆ ದೇಶದ ಸ್ಮಾರ್ಟ್‌ ಫೋನ್‌ಗಳಾದ ಒಪ್ಪೊ ಮತ್ತು ಶಿಯೋಮಿ ಭಾರತೀಯ ಮಾರುಕಟ್ಟೆಯಲ್ಲಿ ಶೇ 72ರಷ್ಟು ಪಾಲು ಹೊಂದಿದ್ದು, ಸ್ಯಾಮ್‌ಸಂಗ್‌ ಮತ್ತು ಆ್ಯಪಲ್‌ ಮೊಬೈಲ್‌ಗಳು, ಅವುಗಳ ವಹಿವಾಟಿನ ಮುಂದೆ ಸಪ್ಪೆ ಎನಿಸಿವೆ.

ಭಾರತೀಯ ತಂತ್ರಜ್ಞಾನ ಕ್ಷೇತ್ರದಲ್ಲಿ ಚೀನಾ ಇಷ್ಟೊಂದು ಬೇರೂರಲು ಮುಖ್ಯವಾಗಿ ಮೂರು ಕಾರಣಗಳಿವೆ. ಭಾರತೀಯ ಸ್ಟಾರ್ಟ್‌ ಅಪ್‌ಗಳಲ್ಲಿ ಹೂಡಿಕೆ ಮಾಡಲು ದೇಶೀಯ ದೊಡ್ಡ ಕಂಪನಿಗಳು ಯಾವುವೂ ಮುಂದೆ ಬಾರದಿದ್ದುದು ಮೊದಲ ಕಾರಣ. ಇದರ ಸಂಪೂರ್ಣ ಪ್ರಯೋಜನವನ್ನು ಚೀನಾ ಪಡೆದುಕೊಂಡಿದೆ. ಅಲಿಬಾಬಾ ಸಂಸ್ಥೆಯು 2015ರಲ್ಲಿ ಪೇಟಿಎಂ ಸಂಸ್ಥೆಯಲ್ಲಿ ಶೇ 40ರಷ್ಟು ಹೂಡಿಕೆ ಮಾಡಿದೆ. 2016ರ ನವೆಂಬರ್‌ನಲ್ಲಿ ನೋಟು ಅಮಾನ್ಯೀಕರಣ ಪ್ರಕ್ರಿಯೆ ನಂತರ ಭಾರತದಲ್ಲಿ ನಗದುರಹಿತ ವಹಿವಾಟು ಹೆಚ್ಚಿದ್ದು, ಅದರ ಲಾಭವನ್ನು ಪೇಟಿಎಂ ಬಾಚಿಕೊಂಡಿದೆ.

ಲಾಭ–ನಷ್ಟದ ಕುರಿತು ಯೋಚಿಸದೆ ಸ್ಟಾರ್ಟ್‌ ಅಪ್‌ಗಳಿಗೆ ಚೀನಾದ ಸಂಸ್ಥೆಗಳು ತಾಳ್ಮೆಯಿಂದ ಬಂಡವಾಳವನ್ನು ಹೂಡುತ್ತಲೇ ಬಂದದ್ದು ಎರಡನೇ ಕಾರಣ. ಬಂಡವಾಳ ಹೂಡಿಕೆ ಮಾಡಲಾದ ಕಂಪನಿ ನಷ್ಟ ಅನುಭವಿಸಿದರೂ ಆ ಸಂಸ್ಥೆಗಳು ತಲೆ ಕೆಡಿಸಿಕೊಳ್ಳಲಿಲ್ಲ. ಮೂರನೆಯ ಕಾರಣವೆಂದರೆ, ಭಾರತದ ಅತಿದೊಡ್ಡ ಮಾರುಕಟ್ಟೆಯು ವಹಿವಾಟು ಹಾಗೂ ಮಾರುಕಟ್ಟೆ ತಂತ್ರ ಎರಡೂ ದೃಷ್ಟಿಯಿಂದ ಚೀನಾ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ.

ಭಾರತದಲ್ಲಿ ಇ–ವಾಹನಗಳ ಬಳಕೆ ಹೆಚ್ಚುತ್ತಿರುವುದು ಚೀನಾ ಪಾಲಿಗೆ ಮತ್ತೊಂದು ದೊಡ್ಡ ಅವಕಾಶ ಸೃಷ್ಟಿಸಿದೆ. ಏಕೆಂದರೆ, ವಾಹನ ತಯಾರಿಕಾ ಕ್ಷೇತ್ರದಲ್ಲೂ ಚೀನಾ ದೈತ್ಯನೆನಿಸಿದೆ. ವಾಹನಗಳ ಕ್ಷೇತ್ರದಲ್ಲಿ ಭಾರತ, ಜಗತ್ತಿನ ಐದನೇ ಅತಿದೊಡ್ಡ ಮಾರುಕಟ್ಟೆ. ಚೀನಾದ ವಾಹನ ತಯಾರಕರು ಭಾರತದಲ್ಲಿ 575 ದಶಲಕ್ಷ ಡಾಲರ್ (₹ 4,370 ಕೋಟಿ)‌ ಹೂಡಿಕೆ ಮಾಡಿದ್ದಾರೆ. ಬೆಲ್ಟ್‌ ಅಂಡ್‌ ರೋಡ್‌ ಯೋಜನೆಯು ಚೀನಾದ ಸರಕುಗಳು ಮತ್ತು ಗುಣಮಟ್ಟಕ್ಕೆ ಮಾನ್ಯತೆಯನ್ನು (ವರ್ಚುವಲ್‌ ಮತ್ತು ಫಿಸಿಕಲ್‌/ಭೌತಿಕ) ತಂದುಕೊಡುವುದಾಗಿದೆ. ಭಾರತವು ಸಹಿಹಾಕದೆ ಭೌತಿಕವಾಗಿ ಯೋಜನೆಯಿಂದ ದೂರ ಉಳಿದರೂ ಏಷ್ಯಾದ ಈ ದೈತ್ಯ ಮಾರುಕಟ್ಟೆಯನ್ನು, ವರ್ಚುವಲ್‌ ವಿಧಾನದಿಂದ ಈಗಾಗಲೇ ತನ್ನ ಬಲೆಯೊಳಗೆ ಬೀಳಿಸಿಕೊಂಡಿದೆ ಚೀನಾ.

ಎಫ್‌ಡಿಐ ಬಿಗಿಗೆ ಆಕ್ಷೇಪ

ಕೊರೊನಾ ತಂದಿರುವ ಸಂಕಷ್ಟದಿಂದಾಗಿ ಭಾರತದ ಕಂಪನಿಗಳು ನಲುಗಿವೆ. ಕಂಪನಿಗಳ ಮಾರುಕಟ್ಟೆ ಮೌಲ್ಯ ಕುಸಿದಿವೆ. ಈ ಸಂದರ್ಭದ ಲಾಭ ಪಡೆದು ಈ ಕಂಪನಿಗಳನ್ನು ಸ್ವಾಧೀನ ಮಾಡಿಕೊಳ್ಳಲು ಅಥವಾ ಹೂಡಿಕೆ ಹೆಚ್ಚಿಸಲು ಚೀನಾ ಪ್ರಯತ್ನಿಸುವ ಸಾಧ್ಯತೆ ಇದೆ. ಎಚ್‌ಡಿಎಫ್‌ಸಿಯಲ್ಲಿ ಪೀಪಲ್ಸ್‌ ಬ್ಯಾಂಕ್‌ ಆಫ್‌ ಚೀನಾದ ಪಾಲು ಶೇ 0.8ರಷ್ಟಿತ್ತು. ಅದನ್ನು ಶೇ 1.01ಕ್ಕೆ ಇತ್ತೀಚೆಗೆ ಹೆಚ್ಚಿಸಿದೆ. ಚೀನಾದ ಇಂತಹ ಪ್ರಯತ್ನಕ್ಕೆ ತಡೆ ಒಡ್ಡುವುದಕ್ಕಾಗಿ, ಭಾರತದ ಜತೆಗೆ ಗಡಿ ಹಂಚಿಕೊಂಡಿರುವ ದೇಶಗಳ ವಿದೇಶಿ ನೇರ ಹೂಡಿಕೆಗೆ (ಎಫ್‌ಡಿಐ) ಸರ್ಕಾರದ ಒಪ್ಪಿಗೆ ಅಗತ್ಯ ಎಂದು ಎಫ್‌ಡಿಐ ನೀತಿಯನ್ನು ಕೇಂದ್ರ ಸರ್ಕಾರ ಬಿಗಿಗೊಳಿಸಿದೆ. ಆದರೆ, ನಿಯಮದಲ್ಲಿ ಆಗಿರುವ ಬದಲಾವಣೆಗೆ ಚೀನಾ ಆಕ್ರೋಶ ವ್ಯಕ್ತಪಡಿಸಿದೆ. ವಿಶ್ವ ವ್ಯಾಪಾರ ಸಂಸ್ಥೆಯ ‘ತಾರತಮ್ಯ ರಹಿತ ನೀತಿ’ಯ ಉಲ್ಲಂಘನೆ ಇದು ಎಂದು ಹೇಳಿದೆ.

ಎಲ್ಲ ದೇಶಗಳ ಹೂಡಿಕೆಯನ್ನು ಸಮಾನವಾಗಿ ಪರಿಗಣಿಸಬೇಕು. ತಾರತಮ್ಯದ ನೀತಿಯನ್ನು ತಕ್ಷಣವೇ ಹಿಂದಕ್ಕೆ ಪಡೆಯಬೇಕು ಎಂದು ಚೀನಾ ಒತ್ತಾಯಿಸಿದೆ. ಈ ಬಗೆಗಿನ ಪ್ರತಿಭಟನಾ ಪತ್ರವನ್ನು ಸೋಮವಾರ ಸಲ್ಲಿಸಿದೆ. ಭಾರತದಲ್ಲಿ ಎಲ್ಲ ನೆರೆ ದೇಶಗಳ ಒಟ್ಟು ಹೂಡಿಕೆಗಿಂತ ಚೀನಾದ ಹೂಡಿಕೆ ಭಾರಿ ಹೆಚ್ಚು. ಆದರೆ, ಈಗಿನ ನಿಯಮದಿಂದಾಗಿ ಭಾರತದಲ್ಲಿ ಹೂಡಿಕೆ ಮಾಡುವುದು ಚೀನಾಕ್ಕೆ ಕಷ್ಟವಾಗುತ್ತದೆ ಎಂದು ದೆಹಲಿಯಲ್ಲಿರುವ ಚೀನಾ ರಾಯಭಾರ ಕಚೇರಿಯ ವಕ್ತಾರೆ ಜಿ ರಾಂಗ್‌ ಹೇಳಿದ್ದಾರೆ.

* ಅಲಿಬಾಬಾ ಮತ್ತು ಟೆನ್ಸೆಂಟ್‌ನಂತಹ ಚೀನಾ ಕಂಪನಿಗಳು ಇ–ಕಾಮರ್ಸ್‌, ಇ–ಪಾವತಿ, ಮೆಸೇಜಿಂಗ್‌ ಸೇರಿ ಹಲವು ಸ್ವರೂಪದ ವಹಿವಾಟು ನಡೆಸುತ್ತವೆ. ಒಂದು ಸ್ವರೂಪದ ವ್ಯವಹಾರದಲ್ಲಿನ ಗ್ರಾಹಕರ ದತ್ತಾಂಶಗಳನ್ನು ಬೇರೆ ಎಲ್ಲಾ ವ್ಯವಹಾರಗಳಿಗೂ ಬಳಸಿಕೊಳ್ಳುತ್ತವೆ. ಬೇರೆ ಕಂಪನಿಗಳು ತಮ್ಮ ಗ್ರಾಹಕರನ್ನು ಸಂಪರ್ಕಿಸದಂತೆ ನೋಡಿಕೊಳ್ಳುತ್ತವೆ. ತಮ್ಮ ಗ್ರಾಹಕರ ಮಾರುಕಟ್ಟೆ ಮತ್ತು ಸೇವೆಯ ದರವನ್ನು ಈ ಕಂಪನಿಗಳೇ ನಿಯಂತ್ರಿಸುತ್ತವೆ. ಭಾರತದಲ್ಲೂ ಇದೇ ರೀತಿಯ ವ್ಯಾಪಾರ ವಾತಾವರಣ ನಿರ್ಮಿಸಿದರೆ, ಅದಕ್ಕಿಂತ ದೊಡ್ಡ ಅಪಾಯ ಬೇರೊಂದಿಲ್ಲ ಎಂದು ವಿಶ್ಲೇಷಕರು ಹೇಳುತ್ತಾರೆ

* ಭಾರತದ ಕಂಪನಿಗಳಲ್ಲಿ ಈ ಕಂಪನಿಗಳು ಹೂಡಿಕೆ ಮಾಡಿದರೆ, ಭಾರತೀಯರ ದತ್ತಾಂಶ ಈ ಕಂಪನಿಗಳ ಪಾಲಾಗುತ್ತದೆ. ಭಾರತ ಸರ್ಕಾರವು ಈ ದತ್ತಾಂಶಗಳ ಮೇಲೆ ನಿಯಂತ್ರಣ ಕಳೆದುಕೊಳ್ಳುವ ಅಪಾಯವೂ ಇದೆ. ಇದರಿಂದ ಭಾರತದ ಮಾರುಕಟ್ಟೆ ಈ ಕಂಪನಿಗಳ ನಿಯಂತ್ರಣಕ್ಕೂ ಒಳಪಡಬಹುದು

* ಟಿಕ್‌ಟಾಕ್‌ ಮತ್ತು ಲೈಕೀಯಂತಹ ಚೀನಿ ಆ್ಯಪ್‌ಗಳಲ್ಲಿ ಚೀನಾ ವಿರೋಧಿ ವಿಷಯಗಳನ್ನು ತೆಗೆದುಹಾಕಲಾಗುತ್ತದೆ. ಭಾರತದ ಗ್ರಾಹಕರಲ್ಲಿ ತನ್ನ ಪರವಾದ ನಿಲುವು ರೂಪುಗೊಳ್ಳಲು ಇಂತಹ ಆ್ಯ‍ಪ್‌ಗಳನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ

* ಲೈಂಗಿಕ ಅಲ್ಪಸಂಖ್ಯಾತರು ಮತ್ತು ಸಲಿಂಗಕಾಮಿಗಳ ನಡುವಣ ಆನ್‌ಲೈನ್ ಸಂವಹನಕ್ಕೆ ಅನುಕೂಲ ಮಾಡಿಕೊಡುವ ಗ್ರೈಂಡರ್ ಆ್ಯಪ್‌ ಚೀನಾ ಕಂಪನಿಯ ಒಡೆತನದಲ್ಲಿದೆ. ಈ ಸ್ವರೂಪದ ಲೈಂಗಿಕತೆಯನ್ನು ಭಾರತದಲ್ಲಿ ಮುಕ್ತವಾಗಿ ಒ‍ಪ್ಪಿಕೊಂಡಿಲ್ಲ. ಈ ಆ್ಯಪ್‌ನಲ್ಲಿ ಸರ್ಕಾರಿ ಅಧಿಕಾರಿಗಳು, ಸೇನಾಧಿಕಾರಿಗಳೂ ಇರುವ ಸಾಧ್ಯತೆ ಇದೆ. ಅವರ ದತ್ತಾಂಶವನ್ನು ಬಳಸಿಕೊಂಡು ಬೆದರಿಸಿ, ಸರ್ಕಾರದ ದಾಖಲೆಗಳನ್ನು ಹೈಜಾಕ್ ಮಾಡುವ ಅಪಾಯವೂ ಇದೆ

ವ್ಯಾಪಾರ ಕೊರತೆಯ ಆತಂಕ

ಚೀನಾದ ಜತೆಗಿನ ವ್ಯಾಪಾರ ಕೊರತೆಯ ಅಂತರ ಹೆಚ್ಚುತ್ತಿರುವುದು ಸಹ ಭಾರತಕ್ಕೆ ಆತಂಕದ ವಿಚಾರವಾಗಿದೆ. 2017ರಲ್ಲಿ ₹ 3.96 ಲಕ್ಷ ಕೋಟಿಯಷ್ಟಿದ್ದ ವ್ಯಾಪಾರ ಕೊರತೆಯು 2018ರಲ್ಲಿ ₹ 4.34 ಲಕ್ಷ ಕೋಟಿಯಾಗಿತ್ತು. ಹೆಚ್ಚು ಹೆಚ್ಚು ಭಾರತೀಯ ಉತ್ಪನ್ನಗಳನ್ನು, ವಿಶೇಷವಾಗಿ ಔಷಧ ಮತ್ತು ಐಟಿ ಉತ್ಪನ್ನಗಳನ್ನು ಖರೀದಿಸುವಂತೆ ಚೀನಾದ ಮೇಲೆ ಭಾರತ ಒತ್ತಡ ಹೇರುತ್ತಲೇ ಇದೆ.

Courtesy: Prajavani

Scroll to Top