ಬೆಂಗಳೂರು: ಜಾಗತಿಕವಾಗಿ ಭಾರತಕ್ಕೆ ಮಹತ್ವದ ಸ್ಥಾನ ಕಲ್ಪಿಸಿಕೊಡಲಿರುವ ಚಂದ್ರಯಾನ-2 ಪ್ರಮುಖ ಹಂತವಾಗಿ ವಿಕ್ರಂ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗುವ ಪ್ರಕ್ರಿಯೆಯಲ್ಲಿ ಕೊನೆಯ ಕ್ಷಣದಲ್ಲಿ ಸಂಪರ್ಕ ಕಳೆದುಕೊಂಡಿದೆ. ಇಸ್ರೋ ವಿಜ್ಞಾನಿಗಳು ಲ್ಯಾಂಡರ್ ಕಳುಹಿಸಿದ ದತ್ತಾಂಶವನ್ನು ವಿಶ್ಲೇಷಣೆ ಮಾಡುತ್ತಿದ್ದಾರೆ.
2.1 ಕಿ.ಮೀ. ವರೆಗೆ ಚಲಿಸಿದ ನಂತರ ಸಿಗ್ನಲ್ ಸ್ಥಗಿತವಾಗಿದೆ. ದತ್ತಾಂಶ ವಿಶ್ಲೇಷಣೆ ಮಾಡಲಾಗುತ್ತಿದೆ ಎಂದು ಇಸ್ರೊ ಅಧ್ಯಕ್ಷ ಕೆ. ಶಿವನ್ ಮಾಹಿತಿ ನೀಡಿದರು. ಇಸ್ರೋ ವಿಜ್ಞಾನಿಗಳು ವಿಕ್ರಂ ಲ್ಯಾಂಡರ್ನೊಂದಿಗೆ ಮತ್ತೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ.
ಚಂದ್ರನ ಮೇಲೆ ಸುರಕ್ಷಿತ ಲ್ಯಾಂಡ್ ಆದ ವಿಶ್ವದ ನಾಲ್ಕನೇ ದೇಶ ಎಂಬುದರ ಜತೆಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್ ಆದ ಹಾಗೂ ಮೊದಲ ಪ್ರಯತ್ನದಲ್ಲೇ ಚಂದ್ರಯಾನ ಯಶಸ್ವಿಗೊಳಿಸಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿತ್ತು. ಆದರೆ ಕೊನೆಯ ಹಂತದಲ್ಲಿ ಲ್ಯಾಂಡರ್ ಸುರಕ್ಷಿತವಾಗಿ ಇಳಿಯಲು ಸಾಧ್ಯವಾಗದಿರುವುದರಿಂದ ಇಸ್ರೋ ವಿಜ್ಞಾನಿಗಳಿಗೆ ನಿರಾಸೆ ಉಂಟು ಮಾಡಿದೆ.
ಚಂದ್ರನ ಸುತ್ತ ಸುತ್ತುತ್ತಿದ್ದ ವಿಕ್ರಂ ಲ್ಯಾಂಡರ್ 30 ಕಿ.ಮೀ. ಎತ್ತರದಿಂದ ಚಂದ್ರನ ಮೇಲೆ ಇಳಿಯುವ ಪ್ರಕ್ರಿಯೆಯನ್ನು ಶುಕ್ರವಾರ ತಡರಾತ್ರಿ 1.40 ಕ್ಕೆ ಆರಂಭಿಸಲಾಗಿತ್ತು. ಹಂತ ಹಂತವಾಗಿ ವೇಗವನ್ನು ಕಡಿಮೆ ಮಾಡಿಕೊಳ್ಳುತ್ತಾ ವಿಕ್ರಂ ಲ್ಯಾಂಡರ್ 1.55 ಕ್ಕೆ ಚಂದ್ರನ ಮೇಲ್ಮೈ ಮೇಲೆ ಸುರಕ್ಷಿತವಾಗಿ ಲ್ಯಾಂಡ್ ಆಗಬೇಕಿತ್ತು. ಆದರೆ 2.1 ಕಿ.ಮೀ. ಎತ್ತರದಲ್ಲಿ ಲ್ಯಾಂಡರ್ನಿಂದ ಸಿಗ್ನಲ್ ಕಡಿತಗೊಂಡಿತ್ತು.
ಕೃಪೆ: ವಿಜಯವಾಣಿ