ನಾಳೆ ಗುಜರಾತ್​ಗೆ ಅಪ್ಪಳಿಸಲಿದೆ ‘ವಾಯು’ ಚಂಡಮಾರುತ: ಕರ್ನಾಟಕದಲ್ಲೂ ಭಾರಿ ಮಳೆ ಸಾಧ್ಯತೆ

ಗುಜರಾತ್​: ಒಡಿಶಾ ರಾಜ್ಯಕ್ಕೆ ಫೋನಿ ಚಂಡಮಾರುತ ಅಪ್ಪಳಿಸಿದ ಬೆನ್ನಲ್ಲೇ ಇದೀಗ ವಾಯು ಚಂಡಮಾರುತ ಗುರುವಾರ ಗುಜರಾತ್​ ಕರಾವಳಿ ಪ್ರವೇಶಿಸಲಿದ್ದು ರಾಜ್ಯದ ಜನರು ಎಚ್ಚರಿಕೆಯಿಂದ ಇರಲು ಭಾರತೀಯ ಹವಾಮಾನ ಇಲಾಖೆ ಸೂಚಿಸಿದೆ.

ವಾಯುಭಾರ ಕುಸಿತದಿಂದ ಅರೇಬಿಯನ್​ ಸಮುದ್ರದಲ್ಲಿ ವಾಯು ಚಂಡಮಾರುತ ಎದ್ದಿದೆ. ಗುರುವಾರ ಗುಜರಾತ್​ ತೀರ ಪ್ರದೇಶಗಳಿಗೆ ಅಪ್ಪಳಿಸುವ ಮೂಲಕ ರಾಜ್ಯಾದ್ಯಂತ ಭಾರಿ ಗಾಳಿ, ಮಳೆ ಉಂಟಾಗಲಿದೆ. ಗುಜರಾತ್​ನ ಪೋರ್​ಬಂದರ್​, ಮಹುವಾ, ವೆರಾವಲ್​ ಮತ್ತು ದಿಯು ಪ್ರದೇಶಗಳಿಗೆ ಸುಮಾರು 110ರಿಂದ 120 ಕಿಮೀ ವೇಗದಲ್ಲಿ ಪ್ರವೇಶಿಸುವ ‘ವಾಯು’ ನಂತರ 135 ಕಿಮಿವರೆಗೂ ವೇಗ ಹೆಚ್ಚಿಸಿಕೊಂಡು ಬೀಸಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಇಂದು ಗುಜರಾತ್​ನ ಉತ್ತರ ಭಾಗಗಳಾದ ಬನಸ್ಕಾಂತಾ ಮತ್ತು ಸಬರ್​ಕಾಂತಾ ಪ್ರದೇಶಗಳಲ್ಲಿ ಗುಡುಗು, ಮಿಂಚು ಜತೆ 30-40 ಕಿಮಿ ವೇಗದಲ್ಲಿ ಅತಿಯಾಗಿ ಗಾಳಿ ಬೀಸುತ್ತಿದ್ದು ಈ ವಾತಾವರಣ ನಾಳೆಯೂ ಮುಂದುವರಿಯಲಿದೆ.

ಈಗಾಗಲೇ ಗುಜರಾತ್ ನಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ತಗ್ಗು ಪ್ರದೇಶಗಳಲ್ಲಿ ವಾಸಿಸುವ ಸುಮಾರು 3 ಲಕ್ಷ ಜನರನ್ನು ಸ್ಥಳಾಂತರಿಸುವ ಸಾಧ್ಯತೆಯಿದ್ದು, 700 ಆಶ್ರಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅಲ್ಲದೆ, ಜೂನ್ 15ರ ವರೆಗೆ ರಾಜ್ಯಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಕರ್ನಾಟಕದಲ್ಲೂ ಭಾರಿ ಮಳೆ ಸಾಧ್ಯತೆ:

ವಾಯು ಚಂಡಮಾರುತ ಪ್ರವೇಶದಿಂದಾಗಿ ಗುಜರಾತ್, ಕರ್ನಾಟಕ ಮತ್ತು ಕೇರಳದ ಕರಾವಳಿ ಪ್ರದೇಶಗಳಲ್ಲಿ ಭೂಕುಸಿತ ಉಂಟಾಗುವ ಸಾಧ್ಯತೆಗಳಿವೆ. ಅಲ್ಲದೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Leave a Comment

Scroll to Top