ನವದೆಹಲಿ: 70ರ ದಶಕದಲ್ಲಿ ಪ್ರತಿ ಮನೆಯಲ್ಲೂ ಮನರಂಜನೆಯನ್ನು ಉಣಬಡಿಸ್ತಾ ಇದ್ದ ಏಕೈಕ ವಾಹಿನಿ ದೂರದರ್ಶನ. ಎಲ್ಲರ ನೆಚ್ಚಿನ ದೂರದರ್ಶನ ವಾಹಿನಿಯ ಐಕಾನಿಕ್ ಲೋಗೋ ಶೀಘ್ರದಲ್ಲೇ ಇತಿಹಾಸದ ಪುಟ ಸೇರಲಿದೆ.
ಏಕೆಂದರೆ ಡಿಡಿ ವಾಹಿನಿಯು ತನ್ನ ನೆಟ್ವರ್ಕ್ ಆಧುನೀಕರಿಸಲು ಮುಂದಾಗಿದ್ದು, ಲೋಗೋ ಬದಲಾವಣೆಗೆ ನಿರ್ಧರಿಸಿದೆ. ಹೊಸ ಲೋಗೋ ವಿನ್ಯಾಸಕ್ಕೆ 2017ರ ಜುಲೈನಿಂದ ಆಗಸ್ಟ್ವರೆಗೆ ಕಾಂಟೆಸ್ಟ್ ನಡೆಸಲಾಗಿತ್ತು. ಇದಕ್ಕೆ ಸುಮಾರು 10,000ಕ್ಕೂ ಹೆಚ್ಚು ಎಂಟ್ರಿಗಳು ಬಂದಿದ್ದು ಅದರಲ್ಲಿ ಐದು ಲೋಗೋಗಳನ್ನು ಅಂತಿಮ ಹಂತಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಪೈಕಿ ಒಂದನ್ನು ಅಂತಿಮಗೊಳಸಲಾಗುತ್ತದೆ.
ಸೆಲೆಕ್ಟ್ ಆಗಿರುವ ಐದು ಲೋಗೋಗಳನ್ನ ಸನೀಶ್ ಸುಖೇಶನ್, ತೇಜೇಶ್ ಸುಧೀರ್, ಆನಂದ್ ಚಿರಾಯಿಲ್, ನಿಖಿಲ್ ಲಾಂಡ್ಗೆ ಹಾಗೂ ಅಬೇ ಥಾಮಸ್ ಜಾಯ್ ವಿನ್ಯಾಸಗೊಳಿಸಿದ್ದಾರೆ. ಪ್ರತಿ ವಿಜೇತರಿಗೂ ತಲಾ ₹1 ಲಕ್ಷ ಬಹುಮಾನ ಸಿಗಲಿದೆ.
ಇನ್ನು ಹೊಸ ಲೋಗೋ ಆಯ್ಕೆ ಬಳಿಕ ಪ್ರಸಾರ ಭಾರತಿ ಡಿಡಿ ವಾಹಿನಿಯ ಕಾರ್ಯಕ್ರಮಗಳಲ್ಲೂ ಹಲವು ಬದಲಾವಣೆಗಳನ್ನುಮಾಡಲಿದೆ ಎಂದು ಹೇಳಲಾಗಿದೆ.
ಈ ಐದು ಲೋಗೋಗಳನ್ನ ಪ್ರಸಾರ ಭಾರತಿ ಟ್ವಿಟರ್ನಲ್ಲಿ ಶೇರ್ ಮಾಡಿದೆ. ಈ ಐದರಲ್ಲಿ ಒಂದನ್ನು ಡಿಡಿ ಇಂಡಿಯಾ ಲೈವ್ ವಾಹಿನಿಯ ಲೋಗೋವನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಪ್ರಸಾರ ಭಾರತಿಯ ಸಿಇಒ ಶಶಿ ಶೇಖರ್ ತಿಳಿಸಿದ್ದಾರೆ.