ಕ್ಲರ್ಕ್‌ ಕೆಲಸದಿಂದ ರಾಷ್ಟ್ರಪತಿಯವರೆಗೆ ಪ್ರಣವ್ ಮುಖರ್ಜಿ ನಡೆದುಬಂದ ಹಾದಿ

ನವದೆಹಲಿ: ಮಾಜಿ ರಾಷ್ಟ್ರಪತಿ, ಭಾರತರತ್ನ ಪ್ರಣಬ್ ಮುಖರ್ಜಿ ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು.

ಪ್ರಣಬ್ ಮುಖರ್ಜಿ ಅವರ ನಿಧನ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 7 ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಿಸಿದೆ. ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ದೆಹಲಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಬಿಗಿ ಭದ್ರತೆಯ ನಡುವೆ ನೆರವೇರಲಿದೆ.

ಆರ್ಥಿಕ ತಜ್ಞ, ಉತ್ತಮ ಹಣಕಾಸು ಸಚಿವ, ರಾಜಕೀಯ ಮುತ್ಸದಿ, ಸಂಭಾವಿತ ರಾಜಕಾರಣಿ, ರಾಜನೀತಿ ನಿಪುಣ, ಟ್ರಬಲ್‌ ಶೂಟರ್ ಇಂಥ ಹಲವು ಗುಣ ವಿಶೇಷಣಗಳಿಂದ ಗುರುತಿಸಿ ಪ್ರಣಬ್ ಮುಖರ್ಜಿ ಅವರು ನಡೆದುಬಂದ ಹಾದಿ ಮಾಹಿತಿ ಹೀಗಿದೆ.

  1. 1935ರ ಡಿಸೆಂಬರ್ 11ರಂದು ಪ್ರಣವ್ ಮುಖರ್ಜಿ ಜನನ.
  2. ಪಶ್ಚಿಮ ಬಂಗಾಳದ ಮಿರತಿ ಎಂಬುದು ಹುಟ್ಟೂರು.
  3. ಸ್ವಾತಂತ್ರ್ಯ ಹೋರಾಟಗಾರ ಕಾಮದಾ ಕಿಂಕರ್ ಮುಖರ್ಜಿ ಮತ್ತು ರಾಜಲಕ್ಷ್ಮಿ ದಂಪತಿಯ ಮಗ
  4. ಕಲ್ಕತ್ತ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ಮತ್ತು ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಜೊತೆಗೆ ಎಲ್‌ಎಲ್‌ಬಿ ಪೂರೈಸಿದರು.
  5. ವಿದ್ಯಾಭ್ಯಾಸದ ಬಳಿಕ ಅಂಚೆ ಮತ್ತು ತಂತಿ ಇಲಾಖೆಯಲ್ಲಿ ಪ್ರಥಮ ದರ್ಜೆ ಕ್ಲರ್ಕ್‌ ಆಗಿ ಕೆಲಸಕ್ಕೆ ಸೇರಿದರು.
  6. ಎರಡು ವರ್ಷದ ಬಳಿಕ ಆ ಸರ್ಕಾರಿ ಉದ್ಯೋಗಕ್ಕೆ ರಾಜೀನಾಮೆ ನೀಡಿ, ಬಂಗಾಳಿಯ ‘ಮದರ್‌ಲ್ಯಾಂಡ್‌‘ ಪತ್ರಿಕೆಗೆ ವರದಿಗಾರರಾಗಿ ಸೇರಿಕೊಂಡರು.
  7. ಪತ್ರಿಕೆಯಲ್ಲಿ ಕೆಲಸ ಮಾಡುತ್ತಿರುವಾಗಲೇ ರಾಜಕಾರಣದತ್ತ ಮುಖ ಮಾಡಿದರು.
  8. ಮಿಡ್ನಾಪುರ ಉಪಚುನಾವಣೆ ಘೋಷಣೆಯಾದಾಗ ವರದಿಗಾರಿಕೆಯನ್ನು ಬಿಟ್ಟು ಚುನಾವಣೆ ಪ್ರಚಾರದತ್ತ ನಡೆದರು.
  9. 1968ರಲ್ಲಿ ನಡೆದ ಮಿಡ್ನಾಪುರ ಉಪಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯ ಪರವಾಗಿ ಕೆಲಸ ಮಾಡುವ ಮೂಲಕ ಅಭ್ಯರ್ಥಿಯ ಗೆಲುವಿಗೂ ಕಾರಣರಾದರು. ಇದು ಮುಖರ್ಜಿ ಅವರ ಜೀವನ ಪಥವನ್ನು ಬದಲಿಸಿತು.
  10. ಉಪಚುನಾವಣೆಗೆ ಪ್ರಣವ್‌ ದುಡಿದ ಕಾರ್ಯವೈಖರಿ ಸಂಘಟನೆ, ಪ್ರಚಾರ ತಂತ್ರ ಇಂದಿರಾ ಗಾಂಧಿ ಅವರ ಗಮನ ಸೆಳೆಯಿತು. ಕೂಡಲೇ ಪ್ರಣವ್‌ ಅವರನ್ನು ಪಕ್ಷಕ್ಕೆ ಕರೆತಂದರು.
  11. ಇಂದಿರಾ ಗಾಂಧಿ ಅವರಿಗೆ ಆಪ್ತರಾಗಿದ್ದರು.
  12. 1969ರಲ್ಲಿ ರಾಜ್ಯಸಭಾ ಸದಸ್ಯರನ್ನಾಗಿ ನೇಮಕ ಮಾಡಿದರು. ಅಂದಿನಿಂದ ಶುರವಾದ ಕಾಂಗ್ರೆಸ್‌ ಜೊತೆಗಿನ ಪಯಣ ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿತು.
  13. 1975, 1981, 1993, 1999 ರಲ್ಲಿ ರಾಜ್ಯಸಭೆಗೆ ನೇಮಕವಾಗಿದ್ದರು.
  14. ಪ್ರಣವ್‌ ಮುಖರ್ಜಿ ಅವರು ಹಣಕಾಸು ಖಾತೆ ಸೇರಿದಂತೆ ಹಲವು ಖಾತೆಗಳನ್ನು ನಿಭಾಯಿಸಿದ್ದಾರೆ.
  15. ಕಾಂಗ್ರೆಸ್‌ ವಲಯದಲ್ಲಿ ಅವರನ್ನು ಎಲ್ಲರೂ ‘ಬಂಗಾಳಿ ಬಾಬು’ ಎಂದು ಪ್ರೀತಿಯಿಂದ ಕರೆಯುತ್ತಿದ್ದರು.
  16. ಯುಪಿಎ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗ ನೆಹರೂ–ಗಾಂಧಿ ಕುಟುಂಬದ ನಿಷ್ಠರಾಗಿದ್ದ ಮುಖರ್ಜಿ ಪ್ರಧಾನಿಯಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಕಾಂಗ್ರೆಸ್‌ ಅವರನ್ನು 2012ರಲ್ಲಿ ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡಿತು. 2017ರವರೆಗೆ ಅವರು ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು.
  17. ಪ್ರಣವ್‌ ಅವರನ್ನು ಎನ್‌ಡಿಎ ಸರ್ಕಾರ ಅತ್ಯುನ್ನತ ನಾಗರಿಕ ಪ್ರಶಸ್ತಿ‌‘ಭಾರತ ರತ್ನ‘ಗೆ ಆಯ್ಕೆ ಮಾಡಿತು. ಪ್ರಣವ್‌ ಭಾರತ ರತ್ನ ಪುರಸ್ಕಾರ ಸ್ವೀಕರಿಸಿದ ಆರನೇ ಮಾಜಿ ರಾಷ್ಟ್ರಪತಿಯಾದರು.

Leave a Comment

Scroll to Top