ವಾಯುಸೇನೆಯ ಹೆಲಿಕಾಪ್ಟರ್​ನಲ್ಲಿ ವುಮೆನ್ ಪವರ್: ಐತಿಹಾಸಿಕ ಸಾಧನೆ ಮಾಡಿದ ಮಹಿಳಾ ಮಣಿಯರು

ಚಂಡಿಗಢ: ಭಾರತೀಯ ವಾಯುಪಡೆಯ ಮಹಿಳಾ ಯೋಧರಿಂದ ಕೂಡಿದ್ದ ತಂಡ ಎಂಐ-17 ಯುದ್ಧಹೆಲಿಕಾಪ್ಟರ್​ನಲ್ಲಿ ಯಶಸ್ವಿಯಾಗಿ ಹಾರಾಟ ಕೈಗೊಂಡು ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ವಾಯುಸೇನೆಯ ಹೆಲಿಕಾಪ್ಟರ್ ಒಂದು ಸಂಪುರ್ಣವಾಗಿ ಮಹಿಳೆಯರಿಂದಲೇ ನಿಯಂತ್ರಿಸಲ್ಪಟ್ಟು ಐತಿಹಾಸಿಕ ಸಾಧನೆ ಮಾಡಿದೆ.

ಎಂಐ-17 ವಿ5 ಯುದ್ಧ ಹೆಲಿಕಾಪ್ಟರ್​ನಲ್ಲಿ ಮಹಿಳಾ ಪೈಲಟ್​ಗಳು ಸೇರಿ ಒಟ್ಟು ಮೂವರು ಮಹಿಳೆಯರು ಹಾರಾಟ ನಡೆಸಿದ್ದಾರೆ. ಕ್ಯಾಪ್ಟನ್,​ ಫ್ಲೈಟ್ ಲೆಫ್ಟಿನೆಂಟ್​ ಪರೂಲ್​ ಭಾರಧ್ವಜ್​, ಕೋ ಪೈಲಟ್​ ಅಮನ್ ನಿಧಿ ಹಾಗೂ ಫ್ಲೈಟ್ ಇಂಜಿನಿಯರ್​ ಆಗಿರುವ ಫ್ಲೈಟ್ ಲೆಫ್ಟಿನೆಂಟ್ ಹೀನಾ ಜೈಸ್ವಾಲ್​​ ಸೇನಾ ಹೆಲಿಕಾಪ್ಟರ್​ನಲ್ಲಿ ಹಾರಾಟ ನಡೆಸಿದರು.

ಯುದ್ಧಸನ್ನದ್ಧತೆಯ ತರಬೇತಿ ಕಾರ್ಯಕ್ರಮದಡಿಯಲ್ಲಿ ನೈಋತ್ಯ ವಾಯು ನೆಲೆಯ ನಿರ್ಬಂಧಿತ ಪ್ರದೇಶಗಳಲ್ಲಿ ಹೆಲಿಕಾಪ್ಟರ್​ ಅನ್ನು ಇಳಿಸುವುದು ಮತ್ತು ಹಾರಾಟ ಕೈಗೊಳ್ಳುವುದು ಸೇರಿ ಹಲವು ರೀತಿಯ ತರಬೇತಿ ವೇಳೆ ಇವರು ಈ ಹಾರಾಟ ಕೈಗೊಂಡಿದ್ದರು ಎಂದು ಭಾರತೀಯ ವಾಯುಪಡೆ ಮೂಲಗಳು ತಿಳಿಸಿವೆ.

ಪಂಜಾಬ್​ನ ಮುಕೇರಿಯನ್​ ನಿವಾಸಿಯಾಗಿರುವ ಫ್ಲೈಟ್​ ಲೆಫ್ಟಿನೆಂಟ್​ ಪಾರುಲ್​ ಭಾರಧ್ವಜ್​, ಎಂಐ-17 ವಿ5 ಯುದ್ಧಹೆಲಿಕಾಪ್ಟರ್ ಅನ್ನು ಚಾಲನೆ ಮಾಡಿದ ಮೊದಲ ಮಹಿಳಾ ಪೈಲಟ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ರಾಂಚಿ ನಿವಾಸಿ ಫ್ಲೈಯಿಂಗ್​ ಆಫೀಸರ್​ ನಿಧಿ ಜಾರ್ಖಂಡ್​ನ ಮೊದಲ ಐಎಎಫ್​ ಪೈಲಟ್​ ಎಂಬ ಹೆಗ್ಗಳಿಕೆ ಹೊಂದಿದ್ದರೆ, ಫ್ಲೈಯಿಂಗ್​ ಆಫೀಸರ್​ ಜೈಸ್ವಾಲ್​ ಚಂಡಿಗಢ ನಿವಾಸಿಯಾಗಿದ್ದು ಭಾರತೀಯ ವಾಯುಪಡೆಯ ಮೊದಲ ಮಹಿಳಾ ಫ್ಲೈಟ್​ ಇಂಜಿನಿಯರ್​ ಎಂಬ ಶ್ರೇಯ ಹೊಂದಿದ್ದಾರೆ.

Scroll to Top