ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ – ಇಸ್ರೋ ಇಂದು ‘ಕಲಾಂಸ್ಯಾಟ್ ವಿ2’ ಮತ್ತು ‘ಮೈಕ್ರೋ ಸ್ಯಾಟ್-ಆರ್’ ಎಂಬ ಎರಡು ಉಪಗ್ರಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ.
ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್‍ಎಲ್‍ವಿ-ಸಿ44 ರಾಕೆಟ್ ಮೂಲಕ ಕಲಾಂಸ್ಯಾಟ್ ವಿದ್ಯಾರ್ಥಿ ಉಪಗ್ರಹ ಹಾಗೂ ಮೈಕ್ರೋಸ್ಯಾಟ್-ಆರ್ ಉಪಗ್ರಹವನ್ನು ಯಶಸ್ವಿಯಾಗಿ ಉಡಾಯಿಸಿದೆ.
ಸುಮಾರು 44.4 ಮೀಟರ್ ಉದ್ದದ 260 ಟನ್ ತೂಕದ ಪಿಎಸ್‍ಎಲ್‍ವಿ ಉಡಾವಣಾ ವಾಹಕವು ಈ ಎರಡೂ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವಲ್ಲಿ ಯಶಸ್ವಿಯಾಯಿತು. ‘ಕಲಾಂ-ಸ್ಯಾಟ್’ ಅನ್ನು ವಿದ್ಯಾರ್ಥಿಗಳೇ ಸೇರಿ ತಯಾರಿಸಿರುವುದು ವಿಶೇಷ. ಇದರ ಜತೆಗೆ ಸೇನಾ ಸಂಶೋಧನೆಗಾಗಿ ತಯಾರಿಸಲಾದ ‘ಮೈಕ್ರೋ ಸ್ಯಾಟ್-ಆರ್’ ಅನ್ನು ಕಕ್ಷೆಗೆ ಸೇರಿಸಲಾಯಿತು.
ಕಲಾಂ ಸ್ಯಾಟ್ ಜಗತ್ತಿನ ಅತ್ಯಂತ ಹಗುರ ಉಪಗ್ರಹವೆನಿಸಿದ್ದು, ಅದನ್ನು ಚೆನ್ನೈನ ‘ಸ್ಪೇಸ್ ಕಿಡ್ಸ್ ಇಂಡಿಯಾ’ ಎಂಬ ಸಂಸ್ಥೆಯ ವಿದ್ಯಾರ್ಥಿಗಳು ತಯಾರಿಸಿದ್ದಾರೆ. ಅದರ ಒಟ್ಟಾರೆ ತೂಕ ಕೇವಲ 1.26 ಕೆ.ಜಿ ಮಾತ್ರ.
ಕೇವಲ 12 ಲಕ್ಷ ರೂಪಾಯಿಗಳ ವೆಚ್ಚದಲ್ಲಿ, ಆರೇ ದಿನಗಳಲ್ಲಿ ತಯಾರಿಸಲಾಗಿರುವ ಈ ಉಪಗ್ರಹವನ್ನು ಇಸ್ರೋ ಒಂದೇ ಒಂದು ರೂಪಾಯಿಯನ್ನೂ ಪಡೆಯದೆ ಕಕ್ಷೆಗೆ ಸೇರಿಸಿತು. ಕಲಾಂ ಸ್ಯಾಟ್ 6 ದಿನಗಳಲ್ಲಿ ತಯಾರಾಗಿತ್ತಾದರೂ, ಅದರ ತಂತ್ರಜ್ಞಾನ ಅಭಿವೃದ್ಧಿಪಡಿಸಲು 6 ವರ್ಷಗಳ ಅಧ್ಯಯನ ನಡೆದಿತ್ತು ಎಂದು 20 ವಿದ್ಯಾರ್ಥಿಗಳ ತಂಡವನ್ನು ಮುನ್ನಡೆಸಿದ್ದ ‘ಸ್ಪೇಸ್ ಕಿಡ್ಸ್ ಇಂಡಿಯಾ’ ಸಂಸ್ಥೆಯ ಮುಖ್ಯಸ್ಥರಾದ ಶ್ರೀಮತಿ ಕೇಶನ್ ತಿಳಿಸಿದ್ದಾರೆ.