ನವದೆಹಲಿ: ಕೊರೋನಾ ವೈರಸ್ ಹಾವಳಿ ಹಿನ್ನೆಲೆಯಲ್ಲಿ ದೇಶದಾದ್ಯಂತ ಮೇ 3ರವರೆಗೂ ದೇಶದಾದ್ಯಂತ ಸಂಪೂರ್ಣ ಲಾಕ್ ಡೌನ್ ಘೋಷಿಸಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ.
ಇಂದು ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಕೊರೋನಾ ವೈರಸ್ ವಿರುದ್ಧದ ಭಾರತದ ಹೋರಾಟ ಅದ್ಬುತವಾಗಿ ನಡೆಯುತ್ತಿದೆ. ಕೊರೋನಾ ವಿರುದ್ಧದ ಹೋರಾಟದಲ್ಲಿ ತೊಡಗಿಕೊಂಡಿರುವ ಎಲ್ಲರ ತ್ಯಾಗದಿಂದ ಇಂದು ಭಾರತ ಸುರಕ್ಷಿತವಾಗಿದೆ. ನಿಮ್ಮ ತ್ಯಾಗದಿಂದ ಹಾನಿ ಕಡಿಮೆಯಾಗಿದೆ. ಎಲ್ಲರೂ ಶಿಸ್ತಿನ ಸಿಪಾಯಿಗಳಂತೆ ಕರ್ತವ್ಯ ನಿರ್ವಹಿಸಿದ್ದೀರಿ. ನಿಮ್ಮ ಪರಿಶ್ರಮದಿಂದಲೇ ಪರಿಣಾಮ ಕಡಿಮೆಯಾಗಿದ್ದು, ಇದರಿಂದ ಪಾರಾಗಬಹುದು. ಪ್ರಮುಖವಾಗಿ ಯಾರಿಗೂ ಸಹ ಊಟದ ತೊಂದರೆಯಾಗಿಲ್ಲ ಎನ್ನುವುದು ಸಮಾಧಾನಕರ ಸಂಗತಿ ಎಂದರು.
ಭಾರತದಲ್ಲಿ 550 ಕೇಸ್ ಇದ್ದಾಗ ಲಾಕ್ ಡೌನ್ ಘೋಷಣೆ ಆಯಿತು. ನಾವು ಆಯ್ಕೆ ಮಾಡಿಕೊಂಡ ಮಾರ್ಗ ಸರಿಯಾಗಿದೆ. ಸಾಮಾಜಿಕ ಅಂತರ ಮತ್ತು ಲಾಕ್ ಡೌನ್ ನಿಂದ ಭಾರತಕ್ಕೆ ದೊಡ್ಡ ಲಾಭವಾಗಿದೆ. ವಿದೇಶದಿಂದ ಬಂದಿದ್ದ ಪ್ರಯಾಣಿಕರನ್ನು ಸ್ಕ್ರೀನಿಂಗ್ ಮಾಡಿದ್ದೇವೆ. ಅವರೆಲ್ಲರನ್ನೂ ಕ್ವಾರಂಟೈನ್ ಮಾಡಿದ್ದೇವೆ. ಬೇರೆ ದೇಶಗಳಿಗೆ ಹೋಲಿಸಿದರೆ, ಕೊರೊನಾ ಸೋಂಕನ್ನು ತಡೆಯುವಲ್ಲಿ ನಾವು ಯಶಸ್ವಿಯಾಗಿದ್ದೇವೆ.
ಅಸಮಾನತೆಯ ವಿರುದ್ಧ ಹೋರಾಡಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನವಾದ ಇಂದು ದೇಶವಾಸಿಗಳ ಪರವಾಗಿ ಅವರಿಗೆ ನಮನ ಸಲ್ಲಿಸುತ್ತೇನೆ. ಭಾರತದಲ್ಲಿ ಸದಾಕಾಲ ಉತ್ಸವಗಳು ನಡೆಯುತ್ತವೆ. ಅನೇಕ ರಾಜ್ಯಗಳಲ್ಲಿ ಹೊಸ ವರ್ಷದ ಹಬ್ಬಗಳ ಕಾಲವಿದು. ಆಯಾ ರಾಜ್ಯದ ಜನರಿಗೆ ನಾನು ಶುಭಾಷಯ ಕೋರುತ್ತೇನೆ ಎಂದು ತಿಳಿಸಿದರು.
ಲಾಕ್ ಡೌನ್ ನಿಂದಾಗಿ ದೇಶದ ಆರ್ಥಿಕತೆಗೆ ದೊಡ್ಡ ಪೆಟ್ಟು ಬಿದ್ದಿದೆ. ಆದರೆ, ದೇಶವಾಸಿಗಳ ಜೀವಕ್ಕಿಂತಲೂ ಆರ್ಥಿಕತೆ ದೊಡ್ಡದಲ್ಲ. ನಿಮ್ಮ ಹಾಗೂ ನಿಮ್ಮ ಪರಿವಾರದ ಆರೋಗ್ಯದ ಕುರಿತಾಗಿ ನಾನು ಪ್ರಾರ್ಥಿಸುತ್ತೇನೆ ಎಂದರು.