ಶಬರಿಮಲೆ: ಪ್ರತಿ ವರ್ಷದಂತೆ ಈ ಬಾರಿ ಶಬರಿಮಲೆಯಲ್ಲಿ ಮಕರ ಜ್ಯೋತಿ ಯನ್ನು ಭಕ್ತರು ಕಣ್ತುಂಬಿಕೊಂಡಿದ್ದಾರೆ. ಕೇರಳದ ಅಯ್ಯಪ್ಪನ ಸನ್ನಿಧಿ ಶಬರಿಮಲೆಯ ಪೊನ್ನಂಬಲಮೇಡು ಬೆಟ್ಟದಲ್ಲಿ ಇಂದು ಮಕರ ಜ್ಯೋತಿ ದರ್ಶನವಾಗಿದೆ.
ದೇವಾಲಯದಿಂದ 8 ಕಿ.ಮೀ ದೂರದಲ್ಲಿರುವ ಪೊನ್ನಂಬಲಮೇಡು ಬೆಟ್ಟದಲ್ಲಿ ಮಕರ ಜ್ಯೋತಿ ಸೋಮವಾರ ಸಂಜೆ 6.38ರ ಸುಮಾರಿಗೆ ಕಾಣಿಸಿಕೊಂಡಿತು. ಸಂಕ್ರಾಂತಿಯ ಮುನ್ನಾದಿನ ಶಬರಿಮಲೆಯಲ್ಲಿ ಮಕರವಿಳಕ್ಕು (ಮಕರ ಜ್ಯೋತಿ) ಎಂಬ ವಿಶೇಷ ವಿದ್ಯಮಾನ ಅನಾದಿಕಾಲದಿಂದಲೂ ಜರಗುತ್ತಿದೆ. ಅದರಂತೆ ಇಂದೂ ಕೂಡ ನಡೆಯಿತು.
ಈ ವಿಶೇಷ ಘಳಿಗೆಗಾಗಿ ಕಾದಿದ್ದ ಲಕ್ಷಾಂತರ ಭಕ್ತರು ಮಕರ ಜ್ಯೋತಿಯ ದರ್ಶನವಾಗುತ್ತಿದ್ದಂತೆ ಗಟ್ಟಿ ಸ್ವರದಲ್ಲಿ “ಸ್ವಾಮಿಯೇ ಶರಣಂ ಅಯ್ಯಪ್ಪ” ಎಂದು ಘೋಷ ಕುಗಿದರು.
ಪಂದಳರಾಜ ಮನೆತನದಿಂದ ಆಭರಣಗಳನ್ನು ತಂದು ದೇವರ ಮೂರ್ತಿಗೆ ಅಲಂಕಾರ ಮಾಡಿ, ಸಂಜೆ 6.30ರ ಹೊತ್ತಿಗೆ ಮಹಾ ಮಂಗಳಾರತಿ ಬೆಳಗಿದ ನಂತರ ದೇಗುಲದ ಎದುರಿನ ಪೊನ್ನಂಬಲಮೇಡು ಬೆಟ್ಟದಲ್ಲಿ ಮಕರ ಜ್ಯೋತಿ (ಮಕರವಿಳಕ್ಕು) ದರ್ಶನವಾಯಿತು.