ಬೆಂಗಳೂರು: ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಗೆ ಭಾರತದ ವಾಯುಪಡೆ ಪ್ರತೀಕಾರ ತೀರಿಸಿಕೊಂಡು ಶೌರ್ಯ ಮೆರೆದಿದೆ. ಇದರಲ್ಲಿ ಪಾಕಿಸ್ತಾನದ ಬಾಲಾಕೋಟ್ಗೆ ನುಗ್ಗಿ ಜೈಶ್-ಎ-ಮೊಹಮ್ಮದ್ ಉಗ್ರರ ದಮನದಲ್ಲಿ ಮುಖ್ಯ ಪಾತ್ರ ವಹಿಸಿದ ಮಿರಾಜ್ -2000 ಯುದ್ಧ ವಿಮಾನದ ಬಗ್ಗೆ ಇದೀಗ ವ್ಯಾಪಕ ಚರ್ಚೆಯಾಗುತ್ತಿದೆ. ಅದರ ಸಾಮರ್ಥ್ಯದ ಬಗ್ಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.
ವಿಶೇಷ ಅಂದರೆ, ಈ ಮಿರಾಜ್-2000 ಯುದ್ಧ ವಿಮಾನ ನಿರ್ಮಿಸಿದ ಕೀರ್ತಿ ಭಾರತಕ್ಕೆ ಸಲ್ಲಬೇಕಾ? ಅಥವಾ ಫ್ರಾನ್ಸ್ಗೆ ಸಲ್ಲಬೇಕಾ? ಎನ್ನುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆ ಶುರುವಾಗಿದೆ. ಈ ನಿಟ್ಟಿನಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶಗಳಿವೆ. ಅವುಗಳಲ್ಲಿ ಪ್ರಮುಖವಾದುದು ಎಂದರೆ, ಈ ವಿಮಾನವನ್ನು ನಿರ್ಮಾಣ ಮಾಡಿದ್ದು ಫ್ರಾನ್ಸ್ನ ಡಸಾಲ್ಟ್ ಏವಿಯೇಷನ್ ಸಂಸ್ಥೆ.
ಇನ್ನೂ 1980 ಮಧ್ಯಭಾಗದಲ್ಲಿ ಭಾರತಕ್ಕೆ ಬಂದ ಈ ಮಿರಾಜ್ ವಿಮಾನ ನಂತರ ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಂಡಿತು. ಬಳಿಕ ಕಾರ್ಗಿಲ್ ಯುದ್ಧದಲ್ಲಿ ಸುಮಾರು 30 ವಿಮಾನಗಳು ತನ್ನ ಶೌರ್ಯಪ್ರದರ್ಶನ ನೀಡಿದ್ದವು. ಇದರ ಜಾಗಕ್ಕೆ ರಫೇಲ್ ಯುದ್ಧ ವಿಮಾನಗಳನ್ನ ತರಲು ಖರೀದಿ ಪ್ರಕ್ರಿಯೆಗಳು ನಡೆದಿವೆ. ಆದರೂ ಸೇನಾವಲಯದಲ್ಲಿ ಸೀನಿಯರ್ ಎನಿಸಿಕೊಂಡಿರುವ ಈ ಮೀರಾಜ್ ವಿಮಾನ ಕಾಲಕ್ಕೆ ತಕ್ಕಂತೆ ಅಪ್ಗ್ರೇಡ್ ಆಗುತ್ತಲೇ ಬಂದಿವೆ. ಹಾಗೇ ಈ ವಿಮಾನವನ್ನು ನವೀಕರಿಸಿದ ಹೆಗ್ಗಳಿಕೆ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ನದ್ದು..
2011 ರಲ್ಲಿ ಭಾರತ ಸರ್ಕಾರ ಒಟ್ಟು 51 ಮಿರಾಜ್ ಯುದ್ಧ ವಿಮಾನಗಳ ನವೀಕರಣಕ್ಕೆ ಸಂಬಂಧಿಸಿದಂತೆ ಡಸಾಲ್ಟ್ನೊಂದಿಗೆ 2.4 ಬಿಲಿಯನ್ ಡಾಲರ್ ಒಪ್ಪಂದವನ್ನ ಕೈಗೊಂಡಿತ್ತು. ಈ ನಿಟ್ಟಿನಲ್ಲಿ ಮೊದಲ ಎರಡು ವಿಮಾನಗಳನ್ನು ಫ್ರಾನ್ಸ್ನಲ್ಲಿ ಅಪ್ಗ್ರೇಡ್ ಅಥವಾ ನವೀಕರಣಗೊಳಿಸಿದರೇ, ಉಳಿದ ವಿಮಾನಗಳನ್ನ ಹೆಚ್ಎಎಲ್ ನವೀಕರಣಗೊಳಿಸುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಮಿರಾಜ್ನ ಸಾಹಸದಲ್ಲಿ ಹೆಚ್ಎಎಲ್ನ ಕೊಡುಗೆಯು ಸೇರಿದಂತಾಗಿದೆ.