ನಿರ್ಭಯಾಗೆ ಕೊನೆಗೂ ಸಿಕ್ಕಿತು ನ್ಯಾಯ, ಹತ್ಯಾಚಾರಿಗಳಿಗೆ ಗಲ್ಲು..!

ನವದೆಹಲಿ: ನಿರ್ಭಯಾ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ವಿಕೃತಿ ಮೆರದಿದ್ದ ನಾಲ್ಕು ಕಾಮುಕರಿಗೆ ಇಂದು[ಶುಕ್ರವಾರ] ಬೆಳಗ್ಗೆ 5:30ಕ್ಕೆ ಸರಿಯಾಗಿ ನವದೆಹಲಿಯಲ್ಲಿರುವ ತಿಹಾರ್‌ ಜೈಲಿನಲ್ಲಿ ಗಲ್ಲಿಗೇರಿಸಲಾಯಿಗಿದೆ. ಈ ಮೂಲಕ 2012ರ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಇಂದು ನ್ಯಾಯ ದೊರಕಿದೆ.

ಇಂದು ಬೆಳಗಿನ ಜಾವ ಮೂರು ಗಂಟೆವರೆಗೂ ದೋಷಿಗಳು ಡೆತ್ ವಾರೆಂಟ್ ಮುಂದೂಡಲು ಪ್ರಯತ್ನಿಸಿದ್ದರು. ಪಟಿಯಾಲಾ ಹೌಸ್ ಕೋರ್ಟ್ ನೀಡಿರುವ ಡೆತ್ ವಾರೆಂಟ್ ಗೆ ತಡೆ ನೀಡುವಂತೆ ಗುರುವಾರ ರಾತ್ರಿ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್’ನಲ್ಲಿ ಅರ್ಜಿ ವಜಾಗೊಳ್ಳುತ್ತಿದ್ದಂತೆ ಮಧ್ಯರಾತ್ರಿ ಸುಪ್ರೀಂಕೋರ್ಟ್’ಗೆ ಹೋಗಿ ತುರ್ತು ಅರ್ಜಿ ವಿಚಾರಣೆ ನಡೆಸಬೇಕೆಂದು ದೋಷಿಗಳು ಮನವಿ ಮಾಡಿಕೊಂಡಿದ್ದರು.

ಮಧ್ಯರಾತ್ರಿ ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾಯಾಲಯ ವಾದ-ಪ್ರತಿವಾದವನ್ನು ಆಲಿಸಿತು. ತದನಂತರ ಅರ್ಜಿಯನ್ನು ವಜಾ ಗೊಳಿಸಿತು. ಇತ್ತ ಅರ್ಜಿ ವಜಾಗೊಳ್ಳುತ್ತಿದ್ದಂತೆ ತಿಹಾರ್ ಜೈಲಿನ ಮುಂದೆ ಜನ ಸೇರಲು ಆರಂಭಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ತಿಹಾರ ಜೈಲಿನ ಆವರಣದಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು.

ನೇಣುಗಂಬವೇರಿಸುವ ಮುನ್ನ ತಿಹಾರ್ ಜೈಲಿನ ಆರೋಗ್ಯಾಧಿಕಾರಿಗಳಿಂದ ನಾಲ್ವರು ಅಪರಾಧಿಗಳ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ನಂತರ ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಅಪರಾಧಿಗಳ ಅಂತಿಮ ಇಚ್ಚೆಯನ್ನು ಕೇಳಲಾಗಿದೆ. ಆದರೆ, ಅಂತಿಮ ಇಚ್ಚೆಗಳಿಗೆ ಸಹಿ ಹಾಕಲು ನಿರಾಕರಿಸಿದ್ದಾರೆ ಎಂಬುದು ತಿಳಿದುಬಂದಿದೆ.

ಕಪ್ಪು ಬಟ್ಟೆ ಧರಿಸಿದ ಕೈದಿಗಳನ್ನು ವಾರ್ಡನ್ ಹಾಗೂ ಹೆಡ್ ವಾರ್ಡನ್ ಗಲ್ಲು ಕೋಣೆಗೆ ಕರೆತಂದಿದ್ದು, ಡೆತ್ ವಾರೆಂಟ್ ಗೆ ಮ್ಯಾಜಿಸ್ಟ್ರೇಟ್ ಸಹಿ ಹಾಕಿದ್ದಾರೆ. ಅಪರಾಧಿಗಳ ಎದುರು ವಾರೆಂಟ್ ಓದಿದ ನಂತರ ಅವರಿಗೆ ಗಲ್ಲು ಶಿಕ್ಷೆ ಜಾರಿ ಮಾಡಲಾಗಿದೆ. ಬಳಿಕ ಗಲ್ಲಿಗೇರಿಸಿದ ಅರ್ಧಗಂಟೆಯ ಬಳಿಕ ಅಪರಾಧಿಗಳ ಸಾವನ್ನ ವೈದ್ಯರು ಖಚಿತಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಖೈದಿಗಳ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದೆ.

Scroll to Top