ನವದೆಹಲಿ: ಜಮ್ಮು-ಕಾಶ್ಮೀರ ಪುಲ್ವಾಮದಲ್ಲಿ ನಿನ್ನೆ ಸೇನಾ ವಾಹನದ ಮೇಲೆ ಬಾಂಬ್ ಸ್ಫೋಟಿಸಿ ಯೋಧರನ್ನು ಹತ್ಯೆಗೈದ ಘಟನೆ ಹಿನ್ನೆಲೆಯಲ್ಲಿ ಅತ್ಯಂತ ನಂಬಿಕಸ್ಥ ರಾಷ್ಟ್ರಗಳ ಪಟ್ಟಿಯಿಂದ ಪಾಕಿಸ್ತಾನವನ್ನು ಹೊರಗಿಡಲಾಗಿದೆ.
ಪಾಕ್ ಕೃಪಾಪೋಷಿತ ಜೈಶೆ ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಅಟ್ಟಹಾಸಕ್ಕೆ ಇಡೀ ಭಾರತವೇ ಅಕ್ಷರಶಃ ಕೆಂಡ ಕಾರುತ್ತಿರುವ ಈ ವೇಳೆ, 1996ರಲ್ಲಿ ಪಾಕಿಸ್ತಾನಕ್ಕೆ ನೀಡಲಾಗಿದ್ದ ಪರಮಾಪ್ತ ರಾಷ್ಟ್ರದ ಸ್ಥಾನಮಾನವನ್ನು ಹಿಂತೆಗೆದುಕೊಂಡು, ಜಾಗತಿಕ ವೇದಿಕೆಗಳಲ್ಲಿ ಇಸ್ಲಾಮಾಬಾದನ್ನು ಇನ್ನಷ್ಟು ಮೂಲೆಗುಂಪು ಮಾಡಲು ಇಂದಿನ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಭದ್ರತಾ ಸಮಿತಿ ಸಭೆಯಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಈ ಹಿಂದೆ ಪಾಕಿಸ್ತಾನವನ್ನು ಭಾರತ ಅತ್ಯಂತ ನಂಬಿಕಸ್ಥ ರಾಷ್ಟ್ರ ಎಂದು ಪರಿಗಣಿಸಿತ್ತು.
ಭಯೋತ್ಪಾದನ ವಿರುದ್ಧದ ಹೋರಾಟದಲ್ಲಿ ತಾನು ಭಾರತದೊಂದಿಗೆ ಕೈ ಜೋಡಿಸಲಿದ್ದೇನೆ ಎಂದು ಹೇಳಿದ್ದರಿಂದ ನೆರೆರಾಷ್ಟ್ರ ಪಾಕಿಸ್ತಾನ ಹೇಳಿಕೊಂಡಿತ್ತು.
ಆದರೆ ಇತ್ತೀಚಿನ ವರ್ಷಗಳಲ್ಲಿ ಪಾಕ್ ತನ್ನ ನರಿ ಬುದ್ದಿಯನ್ನು ತೋರಿಸುತ್ತಲೇ ಬಂದಿದೆ. ಒಂದು ಕಡೆ ಭಯೋತ್ಪಾದನೆ ವಿರುದ್ದ ತಮ್ಮ ಹೋರಾಟ ಎಂದು ಹೇಳುತ್ತಲೇ ಉಗ್ರರಿಗೆ ತನ್ನ ನೆಲದಲ್ಲಿಯೇ ಆಶ್ರಯ ನೀಡಿದೆ.
ನಿನ್ನೆ ಪುಲ್ವಾಮದಲ್ಲಿ ಪಾಕಿಸ್ತಾನದ ಜೈಷ್-ಎ-ಮೊಹಮ್ಮದ್ ಉಗ್ರಗಾಮಿ ಸಂಘಟನೆಯ ಆತ್ಮಾಹುತಿ ದಳದ ಉಗ್ರನೊಬ್ಬ 100 ಕೆಜಿ ಆರ್‍ಡಿಎಕ್ಸ್ ತುಂಬಿಕೊಂಡಿದ್ದ ವಾಹನವನ್ನು ಸೇನಾ ವಾಹನಕ್ಕೆ ಡಿಕ್ಕಿ ಹೊಡೆಸಿದ್ದರಿಂದ 37 ಮಂದಿ ಯೋಧರು ಹುತಾತ್ಮರಾಗಿದ್ದಾರೆ.
ಈ ಘಟನೆಗೆ ಪಾಕಿಸ್ತಾನವೇ ಕಾರಣ ಎಂಬುದು ಮನವರಿಕೆಯಾದ ನಂತರ ಭಾರತ, ನಂಬಿಕೆದ್ರೋಹಿ ಪಾಕಿಸ್ತಾನವನ್ನು ನಂಬಿಕಸ್ಥ ರಾಷ್ಟ್ರಗಳ ಪಟ್ಟಿಯಿಂದ ತೆಗೆದು ಹಾಕಿದೆ.