ಹಣ್ಣಿನೊಳಗೆ ಸ್ಪೋಟಕ ಇಟ್ಟು ಗರ್ಭಿಣಿ ಹೆಣ್ಣಾನೆಯ ಹತ್ಯೆ: ನಿಂತ ಸ್ಥಿತಿಯಲ್ಲೇ ಜೀವ ಬಿಟ್ಟ ಮುಗ್ಧ ಪ್ರಾಣಿ

ಮಲಪ್ಪುರಂ: ಕೇರಳದ ಮಲಪ್ಪುರ ಜಿಲ್ಲೆಯಲ್ಲಿ ಪಟಾಕಿ ತುಂಬಿದ ಅನಾನಸ್ ತಿಂದು ಗರ್ಭಿಣಿ ಆನೆಯೊಂದು ಸಾವನ್ನಪ್ಪಿದ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 15 ವರ್ಷದ ಗರ್ಭಿಣಿ ಆನೆಯು ಸಿಡಿ ಮದ್ದುಗಳನ್ನು ತಿಂದು ಮೇ 27 ರಂದು ಮಲಪ್ಪುರಂನ ವೆಲ್ಲಿಯಾರ್ ನದಿಯಲ್ಲಿ ಮೃತಪಟ್ಟಿದೆ.

ಕೆಲವು ಸ್ಥಳೀಯರು ಆನೆಗೆ ಪಟಾಕಿ ತುಂಬಿದ ಅನಾನಸ್ ನೀಡಿದ್ದು ಸ್ಫೋಟಕವಿದ್ದ ಕಾರಣ ಆನೆಯ ದವಡೆಯಲ್ಲೇ ಪೈನಾಪಲ್ ಸ್ಫೋಟಗೊಂಡಿದೆ. ಸ್ಫೋಟಕದ ತೀವ್ರತೆಗೆ ಆನೆಯ ದವಡೆ, ಬಾಯಿ ಸಂಪೂರ್ಣ ಪುಡಿ ಪುಡಿಯಾಗಿ, ನೋವಿನಿಂದ ಚಿತ್ರಹಿಂಸೆ ಅನುಭವಿಸಿದ ಆಸೆ ಕೊನೆಗೆ ಸಾವನ್ನಪ್ಪಿದೆ.

ನೋವಿನ ಯಾತನೆಯಿಂದ ಘೀಳಿಡುತ್ತಾ ಹೋದ ಆನೆ, ಉರಿ ಶಮನಗೊಳಿಸಲು ಸನಿಹವೇ ಇದ್ದ ಹೊಳೆಯೊಂದರಲ್ಲಿ ನಿಂತಿದೆ. ಅಲ್ಲೇ ನೋವಿನಿಂದ ನಿಂತಿದ್ದ ಆನೆ ನಿಂತ ಸ್ಥಿತಿಯಲ್ಲೇ ಜೀವ ಬಿಟ್ಟಿದೆ.

ಇನ್ನು ಆನೆಗೆ ಸ್ಫೋಟಕ ಇಟ್ಟಿದ್ದು ವಿಷಯ ಗೊತ್ತಾಗುತ್ತಿದ್ದಂತೆ ಅರಣ್ಯಾಧಿಕಾರಿಗಳು ಮತ್ತು ಆನೆ ಸಂರಕ್ಷಣಾ ದಳದವರು ಆನೆಯನ್ನು ರಕ್ಷಿಸಲು ಬಂದಿದ್ದರು. ಪಳಗಿದ ಆನೆಗಳೊಂದಿಗೆ ಅದನ್ನು ನೀರಿನಿಂದ ಹೊರತಂದು ಚಿಕಿತ್ಸೆ ನೀಡಲು ಯತ್ನಿಸಿದ್ದಾರೆ. ಆದರೆ ಏನೇ ಮಾಡಿದರೂ ನೀರಿನಿಂದ ಅದನ್ನು ಹೊರಕ್ಕೆ ತರಲಾಗಲಿಲ್ಲ, ಆನೆ ಮೇಲೆ ಬರಲಿಲ್ಲ.

ಗರ್ಭಿಣಿ ಆನೆಯನ್ನು ಹತ್ಯೆ ಮಾಡಿದ ಪ್ರಕರಣ ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅನಾಮಿಕ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ.

ಇನ್ನು ಅರಣ್ಯ ಸಿಬ್ಬಂದಿಯೆಲ್ಲ ಸೇರಿ ಹೆಣ್ಣಾನೆಯ ದೇಹಕ್ಕೆ, ಸಂಪ್ರದಾಯಬದ್ಧವಾಗಿ, ಎಲ್ಲ ರೀತಿಯ ಗೌರವಗಳನ್ನೂ ಸಲ್ಲಿಸಿ ಅಂತ್ಯಸಂಸ್ಕಾರ ಮಾಡಿದ್ದಾರೆ.

Scroll to Top