ನವದೆಹಲಿ: ರಸ್ತೆ ಬದಿಯಲ್ಲಿ ಸಾವಿರಾರು ಸಸಿಗಳನ್ನು ನೆಡುವುದು, ನೆಟ್ಟ ಸಸಿಗಳನ್ನು ಹೆಮ್ಮರವಾಗಿ ಬಳೆಯುವಂತೆ ಆರೈಕೆ ಮಾಡಿದ್ದು ಸಾಮಾನ್ಯದ ವಿಷಯವಲ್ಲ. ನೆಟ್ಟ ಸಸಿಗಳನ್ನ ತನ್ನ ಮಕ್ಕಳಂತೆ ಪೋಷಿಸಿ ಬೆಳೆಸಿದ ಸಾಲುಮರದ ತಿಮ್ಮಕ್ಕ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶನಿವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭ ವಿಶೇಷ ಘಟನೆಗೆ ಸಾಕ್ಷಿಯಾಗಿದ್ದು ಪದ್ಮಶ್ರೀ ಪುರಸ್ಕಾರ ಸ್ವೀಕರಿಸಿದ ಸಾಲು ಮರದ ತಿಮ್ಮಕ್ಕ, ರಾಷ್ಟ್ರಪತಿ ಅವರಿಗೆ ಆಶೀರ್ವದಿಸಿ ಎಲ್ಲರ ಗಮನ ಸೆಳೆಯಿತು.
ಸಾಮಾನ್ಯವಾಗಿ ರಾಷ್ಟ್ರಪತಿ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಕಟ್ಟುನಿಟ್ಟಿನ ಶಿಷ್ಟಾಚಾರಗಳನ್ನು ಅನುಸರಿಸಲಾಗುತ್ತದೆ. ಆದರೆ ಪದ್ಮಶ್ರೀ ಸ್ವೀಕರಿಸಲು ನಗುಮುಖದಿಂದ ವೇದಿಕೆ ಏರಿದ ತಿಮ್ಮಕ್ಕನ ಮುಗ್ಧತೆಗೆ ಈ ಶಿಷ್ಟಾಚಾರಗಳ ನಿರ್ಬಂಧವಾಗಲಿಲ್ಲ. ಪ್ರಶಸ್ತಿ ಪಡೆಯುವಾಗ ಕ್ಯಾಮೆರಾ ಕಡೆಗೆ ನೋಡುವಂತೆ ಕೋವಿಂದ್ ಅವರು ತಿಳಿಸಿದಾಗ, ತಿಮ್ಮಕ್ಕ ಅವರ ಹಣೆಮುಟ್ಟಿ ಆಶೀರ್ವದಿಸಿದರು. ತಿಮ್ಮಕ್ಕನಿಗಿಂತ ಕೋವಿಂದ್ 33 ವರ್ಷ ಕಿರಿಯರು. ಅವರ ಈ ನಡೆಯಿಂದ ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ನೆರೆದಿದ್ದ ಎಲ್ಲರ ಮುಖದಲ್ಲಿ ಮಂದಹಾಸ ಮೂಡಿತು. ಜೋರು ಚಪ್ಪಾಳೆ ತಟ್ಟಿ ಸಂತಸ ವ್ಯಕ್ತಪಡಿಸಿದರು.
‘ಹುಲಿಕಲ್‌ನಿಂದ ಕಡೂರ್ ವರೆಗಿನ ಸುಮಾರು 4 ಕಿ.ಮೀ. ಹಾದಿಯಲ್ಲಿ ಆಲದ ಮರಗಳನ್ನು ನೆಟ್ಟು ಪೋಷಿಸಿರುವ ಕರ್ನಾಟಕದ ಪರಿಸರವಾದಿ, 107 ವರ್ಷ ವಯಸ್ಸಿನ ಸಾಲುಮರದ ತಿಮ್ಮಕ್ಕ’ ಅವರಿಗೆ ಈ ಸಾಲಿನ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.