ವಿಕ್ರಮ್‌ ಲ್ಯಾಂಡರ್‌ ಪತ್ತೆ ಹಚ್ಚಿದ ನಾಸಾ: ಪತ್ತೆ ಮಾಡಲು ನಾಸಾಗೆ ಸಹಾಯ ಮಾಡಿದ್ದು ಚೆನ್ನೈ ಇಂಜಿನಿಯರ್!​

ಚೆನ್ನೈ: ಚಂದ್ರನಲ್ಲಿ ಇಳಿಯುವ ಕೊನೆ ಕ್ಷಣದಲ್ಲಿ ಇಸ್ರೋ‌‌ ಸಂಪರ್ಕ ಕಳೆದುಕೊಂಡಿದ್ದ ಚಂದ್ರಯಾನ2 ವಿಕ್ರಮ್ ಲ್ಯಾಂಡರ್ ಅವಶೇಷಗಳನ್ನು ಅಮೆರಿಕ ಬಾಹ್ಯಾಕಾಶ ಸಂಸ್ಥೆ ಪತ್ತೆಹಚ್ಚಿದ್ದು, ಅದರ ಕೀರ್ತಿಯನ್ನು ಚೆನ್ನೈ ಮೂಲದ ಇಂಜಿನಿಯರ್​ಗೆ ನೀಡಿದೆ.

ಚಂದ್ರನ ಮೇಲೆ ಅಪ್ಪಳಿಸಿದ ಚಿತ್ರವನ್ನು ನಾಸಾ ಚಂದ್ರ ಅಧ್ಯಯನದ ಎಲ್‌ಆರ್‌ಒ ಕ್ಯಾಮೆರಾ ಸೆರೆ ಹಿಡಿದಿದ್ದು, ಅದನ್ನು ಭಾರತೀಯ ಎಂಜಿನಿಯರ್ ಷಣ್ಮುಗ ಸುಬ್ರಮಣಿಯನ್ ಎಂಬುವರು ಗುರುತಿಸಿದ್ದಾರೆ. ವಿಕ್ರಮ್​ ಲ್ಯಾಂಡರ್​ ಲ್ಯಾಂಡ್​ ಆಗಬೇಕಿದ್ದ ಸ್ಥಳದ ಮೊದಲಿನ ಹಾಗೂ ನಂತರದ ಚಿತ್ರಗಳನ್ನು ಹೋಲಿಕೆ ಮಾಡಿ ನೋಡಿ ಪತನದ ಅವಶೇಷಗಳನ್ನು ಗುರುತಿಸಿದ್ದಕ್ಕೆ ಚೆನ್ನೈ ಮೂಲದ ಷಣ್ಮುಗ ಸುಬ್ರಮಣಿಯನ್​ಗೆ ಪತ್ತೆಹಚ್ಚಿದ ಕೀರ್ತಿಯನ್ನು ನಾಸಾ ನೀಡಿ ಗೌರವಿಸಿದೆ.

ನಾಸಾದ ಲೂನಾರ್ ರೆಕನೈಸನ್ಸ್ ಆರ್ಬಿಟರ್ ಮೂಲಕ ತೆಗೆದ ಚಿತ್ರವೊಂದನ್ನು ನಾಸಾ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದೆ. ಚಿತ್ರದಲ್ಲಿ ವಿಕ್ರಮ್ ಲ್ಯಾಂಡರ್ ಪತನಗೊಂಡ ಸ್ಥಳ ಮತ್ತು ಅದಕ್ಕೆ ಸಂಬಂಧಿಸಿದ ಶಿಲಾಖಂಡರಾಶಿಗಳ ಕ್ಷೇತ್ರಗಳು ಪತ್ತೆಯಾಗಿದೆ. ಅದಲ್ಲದೆ, ಲ್ಯಾಂಡರ್’ನ ಭಾಗಗಳು ಹಲವಾರು ಕಿ.ಮೀ. ವ್ಯಾಪ್ತಿಯಲ್ಲಿ ಹಲವು ಸ್ಥಳಗಳಲ್ಲಿ ಹರಡಿಕೊಂಡಿರುವುದು ಕಂಡುಬಂದಿದೆ.

ಸೆಪ್ಟೆಂಬರ್​​ 26ರಂದು ವಿಕ್ರಮ್​ ಲ್ಯಾಂಡರ್​ಗೆ ಸಂಬಂಧಿಸಿದ ಚಿತ್ರಗಳನ್ನು ನಾಸಾ ಬಿಡುಗಡೆಗೊಳಿಸಿತ್ತು. ಬಳಿಕ ವಿಕ್ರಮ್​ ಲ್ಯಾಂಡರ್​ ಪತನವಾಗುವ ಮುನ್ನ ಅದೇ ಸ್ಥಳದ ಮತ್ತೊಂದು ಚಿತ್ರವನ್ನು ನೀಡಿ ಅದರೊಂದಿಗೆ ಹೋಲಿಕೆ ಮಾಡಿ ಲ್ಯಾಂಡರ್​ ಇರುವ ಗುರುತನ್ನ ಪತ್ತೆ ಹಚ್ಚಲು ಜನರನ್ನು ಆಹ್ವಾನಿಸಿತ್ತು. ಇದರಲ್ಲಿ ಲ್ಯಾಂಡರ್​ ಇರುವಿಕೆಯನ್ನು ಪತ್ತೆಹಚ್ಚಿದ ಮೊದಲಿಗರೆಂದರೆ ಇಂಜಿನಿಯರ್​ ಷಣ್ಮುಗನ್​ ಸುಬ್ರಮಣಿಯನ್ ಎಂದು ನಾಸಾ ತಿಳಿಸಿದೆ.

ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಸುಬ್ರಮಣಿಯನ್​, ಚಂದ್ರನ ಮೇಲ್ಮೈನಲ್ಲಿ ವಿಕ್ರಮ್​ ಲ್ಯಾಂಡರ್​ ಪತ್ತೆಹಚ್ಚಿದ ಶ್ರೇಯಸ್ಸನ್ನು ನಾಸಾ ನನಗೆ ನೀಡಿದೆ ಎಂದು ಬರೆದುಕೊಂಡಿದ್ದಾರೆ. ಇದರ ಮೇಲೆ ಸಾಕಷ್ಟು ಶ್ರಮವಹಿಸಿದ್ದೆ ಎಂದು ಮಾಧ್ಯಮಗಳಿಗೂ ತಿಳಿಸಿದ್ದಾರೆ. ಅಲ್ಲದೆ, ತಮ್ಮ ಟ್ವಿಟರ್​ ಪ್ರೋಫೈಲ್​ನಲ್ಲಿ ” ನಾನು ವಿಕ್ರಮ್​ ಲ್ಯಾಂಡರ್​ ಪತ್ತೆ ಹಚ್ಚಿದೆ” ಎಂದು ಬರೆದುಕೊಂಡಿದ್ದಾರೆ.

ಇಸ್ರೋದ ಮಹತ್ವಾಕಾಂಕ್ಷೆ ಯೋಜನೆ ಚಂದ್ರಯಾನ-2 ಯಶಸ್ವಿಯ ಹೊಸ್ತಿಲಲ್ಲಿ ವಿಕ್ರಮ್​ ಲ್ಯಾಂಡರ್​ ಪತನಗೊಂಡು ವಿಫಲವಾಗಿತ್ತು. ಸೆಪ್ಟೆಂಬರ್​ 7ರಂದು ಚಂದ್ರ ಮೇಲೆ ಸಾಫ್ಟ್​ ಲ್ಯಾಂಡಿಂಗ್​ ಮಾಡುವ ವೇಳೆ ಲ್ಯಾಂಡರ್​ ಪತನಗೊಂಡಿತ್ತು.

Scroll to Top