ಎಸ್.​​ಪಿ ಬಾಲಸುಬ್ರಮಣ್ಯಂ ಆರೋಗ್ಯ ಮತ್ತಷ್ಟು ಕ್ಷೀಣ

ಚೆನ್ನೈ: ಖ್ಯಾತ ಹಿನ್ನೆಲೆ ಗಾಯಕ ಎಸ್​​. ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಮತ್ತಷ್ಟು ಗಂಭೀರವಾಗಿದೆ.

ಕೊರೋನ ಸೋಂಕಿನಿಂದಾಗಿ ಬಾಲಸುಬ್ರಹ್ಮಣ್ಯಂ ಅವರ ದೇಹಸ್ಥಿತಿ ಮತ್ತೆ ಹದಗೆಟ್ಟಿರುವುದರಿಂದ ಅವರನ್ನು ಗರಿಷ್ಠ ಜೀವರಕ್ಷಕ ವ್ಯವಸ್ಥ್ತೆಯಲ್ಲಿ ಇರಿಸಲಾಗಿದೆ ಎಂದು ಆಸ್ಪತ್ರೆಯ ಸಹಾಯಕ ನಿರ್ದೇಶಕಿ ಡಾ.ಅನುರಾಧಾ ಭಾಸ್ಕರನ್ ಅವರು ತಿಳಿಸಿದ್ದಾರೆ. ಆಸ್ಪತ್ರೆಯ ತಜ್ಞ ವೈದ್ಯರ ತಂಡ ಅವರ ದೇಹಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಕೊರೋನ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರನ್ನು ಆಗಸ್ಟ್ 5ರಂದು ಚೆನ್ನೈನ ಎಂಜಿಎಂ ಹೆಲ್ತ್‍ಕೇರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗಸ್ಟ್ 13ರಂದು ಅವರಲ್ಲಿ ಉಸಿರಾಟದ ಸಮಸ್ಯೆ ಉಲ್ಬಣಿಸಿದಾಗ ಅವರನ್ನು ತೀವ್ರ ನಿಗಾ ಘಟಕದಲ್ಲಿರಿಸಿ, ಕೃತಕ ಉಸಿರಾಟ ವ್ಯವಸ್ಥೆಯಲ್ಲಿರಿಸಲಾಗಿತ್ತು. ಇಂದು ಆಸ್ಪತ್ರೆ ಬಿಡುಗಡೆ ಮಾಡಿರುವ ಅವರ ಹೆಲ್ತ್ ಬುಲೆಟಿನ್ ನಲ್ಲಿ ಅವರ ಸ್ಥಿತಿ ಬಿಗಡಾಯಿಸಿದೆ ಎಂದಿದ್ದಾರೆ. ಕಳೆದ 24 ಗಂಟೆ ಅವಧಿಯಲ್ಲಿ ಅವರ ಆರೋಗ್ಯ ಕ್ಷೀಣಿಸುತ್ತಿದೆ. ಅವರ ಚಿಕಿತ್ಸೆಗೆ ಹೆಚ್ಚಿನ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆ.7ರಂದು ಕೊರೋನಾ ಪರೀಕ್ಷೆಗೆ ಒಳಗಾಗಿದ್ದ ಎಸ್ ಪಿ ಅವರಿಗೆ ಸೋಂಕಿಲ್ಲ ಎಂಬುದಾಗಿ ವರದಿ ಬಂದಿತ್ತು. ಅವರ ಶ್ವಾಸಕೋಶ ಕೊಂಚ ಸುಧಾರಿಸುವ ಅವಶ್ಯಕತೆ ಇದೆ ಎಂದು ಪುತ್ರ ಚರಣ್ ತಿಳಿಸಿದ್ದರು. ಅವರ ದೇಹಕ್ಕೆ ಕೃತಕ ಶ್ವಾಸಕೋಶದ ಮೂಲಕ ರಕ್ತಚಲನೆಗೆ ವ್ಯವಸ್ಥೆ ಮಾಡಲಾಗಿದೆ. ಇನ್ನು ಕಳೆದವಾರ ಆಸ್ಪತ್ರೆಯಲ್ಲಿಯೇ ಅವರು ತಮ್ಮ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು.

ಸೆಪ್ಟೆಂಬರ್ 19ರಂದು ಅವರ ಪುತ್ರ ಚರಣ್ ಅವರು ಟ್ವೀಟ್ ಮಾಡಿ, ತನ್ನ ತಂದೆ ಜೀವರಕ್ಷಕ ವ್ಯವಸ್ಥೆಯಲ್ಲಿಯೇ ಇರುವರಾದರೂ, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಮತ್ತು ಅವರಿಗೆ ಬಾಯಿ ಮೂಲಕ ಆಹಾರ ನೀಡುವುದನ್ನು ಆರಂಭಿಸಲಾಗಿದೆ ಎಂದು ತಿಳಿಸಿದ್ದರು. ಆದರೆ ಮತ್ತೆ ಅವರ ಆರೋಗ್ಯದ ಸ್ಥಿತಿ ಗಂಭೀರವಾಗಿದ್ದು, ತಜ್ಞ ವೈದ್ಯರ ತಂಡ ಅವರ ಆರೋಗ್ಯದ ಮೇಲೆ ತೀವ್ರ ನಿಗಾವಹಿಸಿ ಚಿಕಿತ್ಸೆ ನೀಡುತ್ತಿದ್ದಾರೆ.

Leave a Comment

Scroll to Top