ನವದೆಹಲಿ: ಒಡಿಶಾ ತೀರಕ್ಕೆ ಫೋನಿ ಚಂಡಮಾರುತ ಶುಕ್ರವಾರ ಬೆಳಗ್ಗೆ ಅಪ್ಪಳಿಸಿದೆ. ಗಂಟೆಗೆ 200 ಕಿ.ಮೀ ವೇಗದ ಗಾಳಿಯೊಂದಿಗೆ ಮಳೆಯಾಗುತ್ತಿದ್ದು ಜನ ತತ್ತರಿಸಿ ಹೋಗಿದ್ದಾರೆ.
ಒಡಿಶಾದಲ್ಲಿ ಫೋನಿ ಚಂಡಮಾರುತ ಆರ್ಭಟಿಸಿದ ಪರಿಣಾಮ ಬಿರುಗಾಳಿ ಮತ್ತು ಮಳೆಗೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ಹಲವೆಡೆ ಮೊಬೈಲ್ ಸಂಪರ್ಕವೂ ಕಡಿತಗೊಂಡಿದೆ. ಚಂಡಮಾರುತದಿಂದಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ಒಟ್ಟು 5 ಮಂದಿ ಸಾವನ್ನಪ್ಪಿದ್ದಾರೆ.
ಒಡಿಶಾದ ಕರಾವಳಿ ಪ್ರದೇಶಗಳಲ್ಲಿ ಫೋನಿ ಚಂಡಮಾರುತದ ಅಬ್ಬರ ಹೆಚ್ಚಾಗಿದೆ. ಜನಜೀವನ ತೀವ್ರ ಅಸ್ತವ್ಯಸ್ತಗೊಂಡಿದ್ದು ಸುಮಾರು 11 ಲಕ್ಷಕ್ಕೂ ಅಧಿಕ ಜನರನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ.
ಇದೀಗ ಚಂಡಮಾರುತದ ಅಬ್ಬರ ಕೊಂಚ ತಗ್ಗಿದ್ದು, ಚಂಡಮಾರುತ ಪಶ್ಚಿಮ ಬಂಗಾಳದತ್ತ ಮುಖಮಾಡಿದೆ. ಕಡಲ ತೀರಕ್ಕೆ ಒಪ್ಪಳಿಸಿದ ಚಂಡಮಾರುತದ ವೇಗ ಬೆಳಗ್ಗೆ ಪ್ರತೀ ಗಂಟೆಗೆ 245 ಕಿ.ಮೀ ಇತ್ತು. ಇದೀಗ ಚಂಡಮಾರುತದ ವೇಗ ಕಡಿಮೆಯಾಗಿದ್ದು, ಪ್ರತೀ ಗಂಟೆಗೆ 150-160 ವೇಗದಲ್ಲಿ ಬೀಸುತ್ತಿದೆ. ನಾಳೆ ಬೆಳಗ್ಗೆ ಫೋನಿ ಚಂಡಮಾರುತ ಪಶ್ಚಿಮ ಬಂಗಾಳ ಪ್ರವೇಶ ಮಾಡುವ ಸಾಧ್ಯತೆ ಇದ್ದು, ಅಲ್ಲಿಯೂ ಭಾರಿ ಬಿರುಗಾಳಿ ಸಹಿತ ಮಳೆ ತರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮಗುವಿಗೆ ಚಂಡಮಾರುತದ ಹೆಸರು ನಾಮಕರಣ:
ಒಡಿಶಾದ ಮಂಚೇಶ್ವರ್ ನಲ್ಲಿರುವ ರೈಲ್ವೇ ಕೋಚ್ ರಪೇರಿ ವರ್ಕ್ಶಾಪ್ನಲ್ಲಿ ಹೆಲ್ಪರ್ ಆಗಿ ಕೆಲಸ ಮಾಡುತ್ತಿದ್ದ 32 ವರ್ಷದ ಮಹಿಳೆ ಇಂದು ಬೆಳಿಗ್ಗೆ ಸುಮಾರು 11 ಗಂಟೆ ಸಮಯದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ರಾಜ್ಯಕ್ಕೆ ಫೋನಿ ಚಂಡಮಾರುತ ಅಪ್ಪಳಿಸಿದ್ದರಿಂದ, ಆ ಘಳಿಗೆಯಲ್ಲಿಯೇ ಹುಟ್ಟಿದ ಮಗುವಿಗೆ ‘ಫೋನಿ’ ಎಂದೇ ಹೆಸರಿಟ್ಟಿದ್ದಾರೆ.
ಉತ್ತರ ಪ್ರದೇಶದಲ್ಲಿ ನಾಲ್ವರು ಬಲಿ:ಫೋನಿ ಚಂಡಮಾರುತದ ಎಫೆಕ್ಟ್ ಉತ್ತರಪ್ರದೇಶದಲ್ಲೂ ಕಾಣಿಸಿದ್ದು, ಗುರುವಾರ ರಾತ್ರಿ ಸುರಿದ ಸಿಡಿಲು ಸಹಿತ ಭಾರೀ ಆಲಿಕಲ್ಲು ಮಳೆಗೆ ವಿದ್ಯುತ್ ಕಂಬ ಬಿದ್ದು, ನಾಲ್ಕು ಮಂದಿ ಧಾರುಣವಾಗಿ ಸಾವನ್ನಪ್ಪಿದ್ದಾರೆ. ಅಲ್ಲದೆ, ಐವರು ತೀವ್ರ ಗಾಯಗೊಂಡಿದ್ದಾರೆ ಎನ್ನಲಾಗಿದೆ.