
ದೆಹಲಿ: ವಿಶ್ವವಿದ್ಯಾಲಯದ ಅಂತಿಮ ವರ್ಷದ ಪದವಿ ಪರೀಕ್ಷೆಗಳನ್ನು ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಪರೀಕ್ಷೆಗಳನ್ನು ನಡೆಸದೆ ಇರುವುದಕ್ಕೆ ಸಾಧ್ಯವಿಲ್ಲ. ಬೇಕಾದರೆ ಪರೀಕ್ಷಗಳನ್ನು ಮುಂದೂಡಬಹುದು. ಪರೀಕ್ಷೆಗಳಿಲ್ಲದೆ ಪ್ರಮೋಟ್ ಮಾಡುವುದು ಅಸಾಧ್ಯ. ಹಾಗಾಗಿ ಅಂತಿಮ ವರ್ಷದ ಪದವಿ ಪರೀಕ್ಷೆಗಳು ನಡೆಯಲೇಬೇಕು ಎಂದು ಕೋರ್ಟ್ ಹೇಳಿದೆ.
ವಿಶ್ವವಿದ್ಯಾಲಯದ ಅಂತಿಮ ವರ್ಷದ ಪರೀಕ್ಷೆಗಳನ್ನು ಜುಲೈ 6ರಂದು ನಡೆಸಬೇಕೆಂಬ ಯುಜಿಸಿಯ (ವಿಶ್ವವಿದ್ಯಾಲಯ ಅನುದಾನ ಆಯೋಗ) ಅಧಿಸೂಚನೆಯನ್ನು ಎತ್ತಿ ಹಿಡಿದಿರುವ ಸುಪ್ರೀಂ ಕೋರ್ಟ್, ಕೊರೊನಾ ಸಾಂಕ್ರಾಮಿಕ ರೋಗದ ಮಧ್ಯೆ ಸೆಪ್ಟೆಂಬರ್ 30 ರೊಳಗೆ ನಡೆಸಬೇಕಾಗಿರುವ ಅಂತಿಮ ವರ್ಷದ/ಮಧ್ಯಂತರ ಸೆಮಿಸ್ಟರ್ ನ ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯೊಂದರ ಕುರಿತಂತೆ ಶುಕ್ರವಾರ ತನ್ನ ತೀರ್ಪನ್ನು ಪ್ರಕಟಿಸಿದೆ.
ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಲು ರಾಜ್ಯ ಸರ್ಕಾರಗಳು ಅಂತಿಮ ವರ್ಷದ ಪರೀಕ್ಷೆಗಳನ್ನು ನಡೆಸಲೇಬೇಕು. ಆದರೆ, ಕೊರೊನಾ ಸೋಂಕು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ವಿಪತ್ತು ನಿರ್ವಹಣೆ ಕಾಯ್ದೆಯಡಿಯಲ್ಲಿ ಪರೀಕ್ಷೆಗಳನ್ನು ಮುಂದೂಡುವ ಅಥವಾ ಪರೀಕ್ಷೆ ನಡೆಸುವುದಕ್ಕಾಗಿ ದಿನಾಂಕ ನಿಗದಿಪಡಿಸಲು ರಾಜ್ಯ ಸರ್ಕಾರಗಳು ಯುಜಿಸಿಯನ್ನು ಸಂಪರ್ಕಿಸಬಹುದು ಎಂದು ನ್ಯಾಯಾಲಯ ಹೇಳಿದೆ.