ವಿಶೇಷ ಆರ್ಮಿ ಕ್ಯಾಪ್ ಧರಿಸಿ ರಾಂಚಿಯಲ್ಲಿ ಕಣಕ್ಕಿಳಿದ ಟೀಂ ಇಂಡಿಯಾ

ರಾಂಚಿ: ಭಾರತ-ಆಸ್ಟ್ರೇಲಿಯಾ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೇನಾ ಕ್ಯಾಪ್ ಧರಿಸಿ ಕಣಕ್ಕಿಳಿಯುವ ಮೂಲಕ ಪುಲ್ವಾಮಾದಲ್ಲಿ ಹುತಾತ್ಮರಾದ ವೀರ ಯೋಧರಿಗೆ ಗೌರವ ಸೂಚಿಸಿದೆ.

ಟಾಸ್’ಗೂ ಮುನ್ನ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ತಂಡದ ಎಲ್ಲಾ ಆಟಗಾರರಿಗೆ ಕ್ಯಾಪ್ ನೀಡಿದರು. ಪುಲ್ವಾಮಾ ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟ ಸೈನಿಕರಿಗೆ ಗೌರವ ನೀಡಲು ವಿಶೇಷವಾಗಿ ಭಾರತದ ಸೇನೆಗೆ ಬೆಂಬಲ ಸೂಚಿಸುವ ಉದ್ದೇಶದಿಂದ ಕ್ಯಾಫ್ ಧರಿಸಲಾಗಿದೆ.

ಪಂದ್ಯದಲ್ಲಿ ವಿಶೇಷ ಕ್ಯಾಪ್ ಧರಿಸಿ ಆಡುವುದು ಮಾತ್ರವಲ್ಲದೇ ಯೋಧರ ಮಕ್ಕಳ ಶಿಕ್ಷಣ, ಕುಟುಂಬಗಳ ನೆರವಿಗೆ ಧವಿಸುವ ರಾಷ್ಟ್ರೀಯ ರಕ್ಷಣಾ ನಿಧಿಗೆ ಹಣ ಸಂಗ್ರಹಿಸಲು ಕೂಡ ಟೀಂ ಇಂಡಿಯಾ ಮುಂದಾಗಿದೆ.

ಟಾಸ್ ನಂತರ ಮಾತನಾಡಿದ ಕೊಹ್ಲಿ, ಇದೊಂದು ವಿಶೇಷ ಕ್ಯಾಪ್. ನಮ್ಮ ಸೈನಿಕರಿಗೆ ಗೌರವ ಸೂಚಕವಾಗಿ ಈ ಸೇನಾ ಕ್ಯಾಪ್ ಧರಿಸಿ ಕಣಕ್ಕಿಳಿಯುತ್ತಿದ್ದೇವೆ. ನಾವೆಲ್ಲಾ ಈ ಪಂದ್ಯದ ಸಂಪೂರ್ಣ ಸಂಭಾವನೆಯನ್ನು ಭಾರತೀಯ ಸೇನಾ ನಿಧಿಗೆ ಅರ್ಪಿಸುತ್ತಿದ್ದೇವೆ. ದೇಶದ ಪ್ರತಿಯೊಬ್ಬರು ನಮ್ಮ ಸೇನೆಯ ಹಾಗೂ ಅವರ ಕುಟುಂಬಕ್ಕೆ ಬೆಂಬಲವಾಗಿ ನಿಲ್ಲಬೇಕು ಎಂದು ಮನವಿ ಮಾಡಿದರು.

ಈಗಾಗಲೇ ಸರಣಿಯಲ್ಲಿ 2-0 ಅಂತರದಲ್ಲಿ ಮುನ್ನಡೆ ಪಡೆದಿರುವ ಟೀಂ ಇಂಡಿಯಾ ರಾಂಚಿ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿ ಜಯಿಸುವ ಗುರಿ ಹೊಂದಿದೆ. ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

Scroll to Top