ಹೈದರಾಬಾದ್: ಪಶು ವೈದ್ಯೆ ಮೇಲಿನ ರೇಪ್ ಹಾಗೂ ಕೊಲೆ ಪ್ರಕರಣ ಮಹತ್ವದ ತಿರುವು ಪಡೆದಿದೆ. ಪ್ರಕರಣದ ನಾಲ್ವರೂ ಆರೋಪಿಗಳು ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾಗಿದ್ದಾರೆ. ಘಟನೆ ಮರುಸೃಷ್ಟಿಗೆಂದು ಆರೋಪಿಗಳನ್ನು ಘಟನಾ ಸ್ಥಳಕ್ಕೆ ಕರೆದೊಯ್ದಾಗ ಆರೋಪಿಗಳು ತಪ್ಪಿಸಲು ಯತ್ನಿಸಿದ್ದು, ಈ ವೇಳೆ ಬೇರೆ ವಿಧಿ ಇಲ್ಲದ ಪೊಲೀಸರು ಆರೋಪಿಗಳನ್ನು ಎನ್‌ಕೌಂಟರ್ ಮಾಡಿದ್ದಾರೆ.
ಕೋರ್ಟ್ ಆದೇಶದ ಮೇರೆಗೆ ಘಟನೆಯ ಮರುಸೃಷ್ಟಿಗೆಂದು ಪೊಲೀಸರು ಜೈಲಿನಲ್ಲಿದ್ದ ನಾಲ್ವರು ಆರೋಪಿಗಳಾದ ಆರಿಫ್, ಚನ್ನಕೇಶವುಲು, ಶಿವ ಹಾಗೂ ನವೀನ್‌ರನ್ನು ಹೈದರಾಬಾದ್‌ನ ಶಾದ್ ನಗರ ಬಳಿಯ ರಾಷ್ಟ್ರೀಯ ಹೆದ್ದಾರಿ 44ಕ್ಕೆ ಬೆಳಗ್ಗಿನ ಜಾವ ಸುಮಾರು 03.30ಕ್ಕೆ ಕರೆದೊಯ್ದಿದ್ದರು. ಆದರೆ ಆರೋಪಿಗಳು ಈ ಅವಕಾಶ ನೋಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಕಾಮುಕರು, ಪೊಲೀಸರ ಮೇಲೆ ಕಲ್ಲೆಸೆದು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆಗ ಪೊಲೀಸರು ಆತ್ಮರಕ್ಷಣೆಗಾಗಿ ಆರೋಪಿಗಳ ಮೇಲೆ ಗುಂಡು ಹಾರಿಸಿ ಎನ್‌ಕೌಂಟರ್ ಮಾಡಿದ್ದಾರೆ. ಇನ್ನು ಪೊಲೀಸರ ಈ ಕ್ರಮಕ್ಕೆ ದೇಶವೇ ಮೆಚ್ಚುಗೆ ವ್ಯಕ್ತಪಡಿಸಿದೆ.
ಪಶುವೈದ್ಯೆ ಕಳೆದ ಗುರುವಾರ ರಾತ್ರಿ ಕೆಲಸ ಮುಗಿಸಿ ಸ್ಕೂಟಿಯಲ್ಲಿ ತೆರಳುತ್ತಿದ್ದರು. ಜನನಿಬಿಡ ಪ್ರದೇಶದಲ್ಲಿ ರಾತ್ರಿ 9.30ರ ಸುಮಾರಿಗೆ ಆಕೆಯ ಬೈಕ್ ಪಂಕ್ಚರ್ ಆಗಿತ್ತು. ಈ ವಿಚಾರವನ್ನು ಆಕೆ ಮನೆಗೆ ಕರೆ ಮಾಡಿ ಹೇಳಿದ್ದರು. ಅಷ್ಟೇ ಅಲ್ಲ, ಪಕ್ಕದಲ್ಲಿ ಲಾರಿ ಚಾಲಕರಿದ್ದಾರೆ ಅವರನ್ನು ನೋಡಿ ನನಗೆ ಭಯವಾಗುತ್ತಿದೆ ಎಂದು ಆಕೆ ದೂರವಾಣಿ ಕರೆಯಲ್ಲಿ ಹೇಳಿದ್ದರು. ನಂತರ ಆಕೆ ಮೊಬೈಲ್ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಹೀಗಾಗಿ ರಾತ್ರಿ 11 ಗಂಟೆಗೆ ಕುಟುಂಬದವರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಪಶುವೈದ್ಯೆ ಮೇಲೆ ಲಾರಿ ಚಾಲಕರು ಅತ್ಯಾಚಾರ ನಡಿಸಿ, ಆಕೆಯನ್ನು ಕೊಲೆ ಮಾಡಿದ್ದರು. ಅತ್ಯಾಚಾರ ಮಾಡಿದ ನಂತರ ಶಂಶಾಬಾದ್ನ ತೊಂಡುಪಲ್ಲಿಯಲ್ಲಿ ಟೋಲ್ ಪ್ಲಾಜಾ ಸಮೀಪ ಪಶುವೈದ್ಯೆಯನ್ನು ಕೊಂದು, ಅಲ್ಲಿಂದ 25 ಕಿ.ಮೀ ದೂರದಲ್ಲಿ ಆಕೆಯನ್ನು ಸುಡಲಾಗಿತ್ತು. ಶುಕ್ರವಾರ ಬೆಳಗ್ಗೆ ಆಕೆಯ ಶವ ಸಿಕ್ಕಿತ್ತು. ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಬಂಧಿಸಲಾಗಿತ್ತು. ಈ ಘಟನೆಗೆ ಇಡೀ ದೇಶವೇ ಬೆಚ್ಚಿ ಬಿದ್ದಿತ್ತು. ಅಷ್ಟೇ ಅಲ್ಲ, ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ ಎನ್ನುವ ಕೂಗು ಕೇಳಿ ಬಂದಿತ್ತು.