ಅನ್‌ಲಾಕ್ 5.0 ಮಾರ್ಗಸೂಚಿ ಬಿಡುಗಡೆ: ಹೀಗಿದೆ ನೋಡಿ ಕೇಂದ್ರದ ಹೊಸ ಮಾರ್ಗಸೂಚಿ

ನವದೆಹಲಿ: ಕೇಂದ್ರ ಸರ್ಕಾರ ಅನ್‌ಲಾಕ್ 5.0 ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಸಿನಿಮಾ ಹಾಲ್, ಕ್ರೀಡಾಪಟುಗಳಿಗಾಗಿ ಈಜುಕೊಳ, ಕ್ರೀಡಾ ತರಬೇತಿ ಹಾಗೂ ಮನೋರಂಜನಾ ಪಾರ್ಕ್‌ಗಳನ್ನು ತೆರೆಯಲು ಅನುಮತಿ ನೀಡಿದೆ.

ಈ ಕುರಿತಂತೆ ಕೇಂದ್ರ ಗೃಹ ಸಚಿವಾಲಯ ಮಾರ್ಗಸೂಚಿ ಬಿಡುಗಡೆ ಮಾಡಿದ್ದು ಅಕ್ಟೋಬರ್ 15ರಿಂದ ಈ ಸಡಿಲಿಕೆ ಅನ್ವಯವಾಗಲಿದೆ.

ಅನ್​ಲಾಕ್​-5ರ ಮಾರ್ಗಸೂಚಿ:

  • ಅಕ್ಟೋಬರ್ 15 ರಿಂದ ಸಿನಿಮಾ ಹಾಲ್​ಗಳು, ಥಿಯೇಟರ್​ಗಳು, ಮಲ್ಟಿಪ್ಲೆಕ್ಸ್​ಗಳನ್ನು ಪ್ರಾರಂಭಿಸಬಹುದು. ಆದರೆ ಶೇ.50ರಷ್ಟು ಮಾತ್ರ ಆಸನ ವ್ಯವಸ್ಥೆ ಇರುವುದು ಕಡ್ಡಾಯ. ಈ ಸಂಬಂಧ ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ಶೀಘ್ರವೇ ಎಸ್​ಒಪಿ ಬಿಡುಗಡೆಯಾಗಲಿದೆ.
  • ಬ್ಯುಸಿನೆಸ್​ ಟು ಬ್ಯುಸಿನೆಸ್​(ಬಿ2ಬಿ-ಎರಡು ವ್ಯವಹಾರಗಳ ಮಧ್ಯೆ ನಡೆಯುವ ಉತ್ಪನ್ನಗಳ ವಹಿವಾಟು) ಎಕ್ಸಿಬಿಷನ್​ಗಳನ್ನು ಪ್ರಾರಂಭಿಸಬಹುದು. ಇದಕ್ಕೆ ಸಂಬಂಧಪಟ್ಟ ಎಸ್​ಒಪಿಯನ್ನು ವಾಣಿಜ್ಯ ಇಲಾಖೆ ಶೀಘ್ರವೇ ಬಿಡುಗಡೆ ಮಾಡುತ್ತದೆ.
  • ಕ್ರೀಡಾಪಟುಗಳ ತರಬೇತಿಗಾಗಿ ಸ್ವಿಮ್ಮಿಂಗ್​ ಪೂಲ್​​ಗಳನ್ನು ಬಳಕೆ ಮಾಡಬಹುದಾಗಿದೆ. ಇದರ ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್​ಒಪಿ)ಯನ್ನು ಕ್ರೀಡಾ ಸಚಿವಾಲಯ ನೀಡಲಿದೆ.
  • ಮನರಂಜನಾ ಉದ್ಯಾನಗಳು​ ಮತ್ತು ಅದನ್ನು ಹೋಲುವ ಎಲ್ಲ ಸ್ಥಳಗಳನ್ನೂ ತೆರೆಯಲು ಅನುಮತಿ ನೀಡಲಾಗಿದೆ. ಎಸ್​ಒಪಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ.

ಅ.15ರಿಂದ ಶಾಲಾ-ಕಾಲೇಜುಗಳ ಆರಂಭ:

ಅಕ್ಟೋಬರ್ 15 ರಿಂದ ಶಾಲೆ, ಕಾಲೇಜುಗಳನ್ನು ಮತ್ತೆ ತೆರೆಯಲು ಅವಕಾಶ ನೀಡಲಾಗುವುದು ಎಂದು ಹೇಳಿದೆ. ಆದರೆ ಅಂತಿಮ ನಿರ್ಧಾರವನ್ನು ಆಯಾ ರಾಜ್ಯಗಳು ಮತ್ತು ಆಯಾ ಸಂಸ್ಥೆಗಳಿಗೆ ಬಿಡಲಾಗಿದೆ.

Scroll to Top