ನಿರ್ಮಾಣವಾಗಲಿದೆ 111 ಅಡಿ ಎತ್ತರದ ಸಿದ್ದಗಂಗಾ ಶ್ರೀಗಳ ಪ್ರತಿಮೆ

ರಾಮನಗರ: ನಡೆದಾಡುವ ದೇವರು ಎಂದೇ ನಾಡಿನ ಜನಮಾಸನ ದಲ್ಲಿ ಸ್ಥಾನ ಪಡೆದು ಅಭಿನವ ಬಸವಣ್ಣರೆಂದೇ ಖ್ಯಾತರಾದ ಸಿದ್ದಗಂಗಾ ಮಠದ ಲಿಂಗೈಕ್ಯ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ 111 ಅಡಿ ಎತ್ತರ ಪ್ರತಿಮೆ ಜಿಲ್ಲೆಯಲ್ಲಿ ಸ್ಥಾಪನೆಗೊಳ್ಳಲಿದೆ.

ಸಿದ್ದಗಂಗಾ ಶ್ರೀಗಳ ಹುಟ್ಟೂರಾದ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ವೀರಾಪುರದಲ್ಲಿ ಬೃಹತ್ ಪ್ರತಿಮೆ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶುಕ್ರವಾರ (ನ.8) ಚಾಲನೆ ನೀಡಲಿದ್ದಾರೆ.

ವೀರಾಪುರದ ಗ್ರಾಮವನ್ನು ಪಾರಂಪರಿಕ ಹಾಗೂ ವಿಶ್ವ ದರ್ಜೆಯ ಸಾಂಸ್ಕೃತಿಕ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಈಗಾಗಲೇ ₹25 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಶ್ರೀಗಳು 111 ವರ್ಷ ಜೀವಿಸಿ ಸಮಾಜದ ಒಳಿತಿಗೆ ತಮ್ಮ ಬದುಕನ್ನು ಸಮರ್ಪಿಸಿಕೊಂಡವರು. ಅದರ ಸವಿನೆನಪಿಗಾಗಿ ಇಲ್ಲಿ ಶ್ರೀಗಳ 111 ಅಡಿ ಎತ್ತರದ ಮೂರ್ತಿಯನ್ನು ಇಲ್ಲಿ ಸ್ಥಾಪಿಸಲಾಗುತ್ತಿದೆ. ಸಿದ್ಧಗಂಗಾ ಶ್ರೀಗಳ ಪೂರ್ವಾಶ್ರಮದ ಕುಟುಂಬ ಸದಸ್ಯರು ಮತ್ತು ಭಕ್ತವೃಂದದ ಒತ್ತಾಯದ ಮೇರೆಗೆ ಶ್ರೀಗಳು ಬಾಲ್ಯದ ದಿನಗಳಲ್ಲಿ ಬಹಳ ಇಷ್ಟಪಡುತ್ತಿದ್ದ ವೀರಾಪುರದಲ್ಲಿರುವ ಬಂಡೆ ಮೇಲೆಯೇ ಪ್ರತಿಮೆ ನಿರ್ಮಾಣಗೊಳ್ಳಲಿದೆ.

ಶ್ರೀಗಳ ಪ್ರತಿಮೆ ನಿರ್ಮಾಣ ಜವಾಬ್ದಾರಿಯನ್ನು ಪಿಎಸ್​ಎಪಿ ಆರ್ಕಿಟೆಕ್ಟ್ ಕಂಪನಿಗೆ ನೀಡಲಾಗಿದೆ. ಈ ಕಂಪನಿ ಈಗಾಗಲೇ ಗದಗ ಜಿಲ್ಲೆಯಲ್ಲಿ ಬಸವೇಶ್ವರರ 116 ಅಡಿ ಪ್ರತಿಮೆ ನಿರ್ಮಾಣ ಮಾಡಿದೆ. ಮಲೆ ಮಹದೇಶ್ವರ ಬೆಟ್ಟದಲ್ಲಿಯೂ ಮಹದೇಶ್ವರ ಸ್ವಾಮಿ ಪ್ರತಿಮೆ ನಿರ್ವಿುಸುತ್ತಿದೆ. ಇದೀಗ ಶ್ರೀಗಳ ಬೃಹತ್ ಪ್ರತಿಮೆ ನಿರ್ಮಾಣ ಜವಾಬ್ದಾರಿಯನ್ನು ಈ ಸಂಸ್ಥೆಗೆ ನೀಡಲಾಗಿದ್ದು, ಶ್ರೀಗಳ ಪ್ರತಿಮೆ ಹಲವುವಿಶೇಷತೆಗಳನ್ನು ಒಳಗೊಂಡಿರಲಿದೆ.

ರಾಜ್ಯದಲ್ಲೇ ಅತಿ ಎತ್ತರದ ಪ್ರತಿಮೆ

111 ಅಡಿ ಎತ್ತರದ ಶ್ರೀಗಳ ಪ್ರತಿಮೆ ರಾಜ್ಯದಲ್ಲೇ ಅತಿ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಗದಗದಲ್ಲಿ ನಿರ್ಮಾಣ ಮಾಡಿರುವ ಬಸವೇಶ್ವರರ ಪ್ರತಿಮೆ ತಳಪಾಯ ಸೇರಿ ಒಟ್ಟು 116 ಅಡಿ ಎತ್ತರವಿದ್ದರೆ, ಶ್ರೀಗಳ ಪ್ರತಿಮೆ ತಳಪಾಯ ಸೇರಿ ಒಟ್ಟು 141 ಅಡಿ ಎತ್ತರವಿರಲಿದೆ. 30 ಅಡಿ ಎತ್ತರದ ಬಂಡೆಯಾಕಾರದ ತಳಪಾಯ ನಿರ್ಮಾಣ ಮಾಡಿ, ಅದರ ಮೇಲೆ ಊರುಗೋಲು ಹಿಡಿದು ನಿಂತಿರುವ ಶ್ರೀಗಳ ಬೃಹತ್ ಪ್ರತಿಮೆ ಇರಲಿದೆ. ಜತೆಗೆ ಶ್ರೀಗಳ ಪ್ರತಿಮೆಯ ಪದತಳಕ್ಕೆ ಹೋಗಲೂ 111 ಮೆಟ್ಟಿಲುಗಳನ್ನು ನಿರ್ಮಾಣ ಮಾಡುತ್ತಿರುವುದು ಮತ್ತೊಂದು ವಿಶೇಷ. ತಳಪಾಯದಲ್ಲಿ ಸಭಾಭವನ, ಮ್ಯೂಸಿಯಂ, ಮೆಡಿಟೇಷನ್ ಹಾಲ್, ಜತೆಗೆ ಲಾಬಿಗಳು ಇರಲಿದ್ದು, ಮ್ಯೂಸಿಯಂನಲ್ಲಿ ಶ್ರೀಗಳ ಜೀವನವನ್ನು ತೋರಿಸುವ ಆಧುನಿಕ ವಿಡಿಯೋ ಮತ್ತು ಆಡಿಯೋ ವ್ಯವಸ್ಥೆ ಇರಲಿದೆ. ತಳಪಾಯದ ಸುತ್ತ ಮುತ್ತ ಭಕ್ತರು ಮತ್ತು ಪ್ರವಾಸಿಗರು ಕುಳಿತು ನೋಡಲು ಅನುಕೂಲವಾಗುವಂತೆ ಆಸನ ವ್ಯವಸ್ಥೆ ಮಾಡಲಾಗುತ್ತದೆ.

Scroll to Top