
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹಬ್ಬುತ್ತಿದ್ದು, ಸುಮಾರು ಒಂದು ಲಕ್ಷ ಜನರಿಗೆ ಸೋಂಕು ತಗುಲಬಹುದೆಂದು ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.
ಇಂದು ವಿಧಾನ ಪರಿಷತ್ತಿನಲ್ಲಿ ಮಾತನಾಡಿದ ಅವರು ಕೊರೋನಾ ವೈರಸ್ ಭೀತಿ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ರಾಜ್ಯದಲ್ಲಿ ಈಗಾಗಲೇ 39 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಒಂದು ಲಕ್ಷ ಜನಕ್ಕೆ ಸೋಂಕು ತಗುಲಬಹುದು ಎಂದು ಅಂದಾಜಿಸಲಾಗಿದೆ. ಇದರಿಂದ ಕ್ವಾರಂಟೈನ್ ಮಾಡೋಕೆ 20 ಸಾವಿರ ಹೋಟೆಲ್ ರೂಮ್ ಪಡೆಯಲು ಮುಂದಾಗಿದ್ದು, ಎಲ್ಲಾ ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ವೆಂಟಿಲೇಟರ್ ಸೌಲಭ್ಯ ಮಾಡಿಕೊಳ್ಳಲಾಗುತ್ತಿದ್ದು, ಸರ್ಕಾರದಿಂದ ಒಂದು ಸಾವಿರ ವೆಂಟಿಲೇಟರ್ ಆರ್ಡರ್ ಮಾಡಿದ್ದೇವೆ. 15 ಲಕ್ಷ ಮಾಸ್ಕ್ ಆರ್ಡರ್ ಮಾಡಿದ್ದೇವೆ. ಇನ್ನು 5 ಲಕ್ಷ N-95 ಮಾಸ್ಕ್ ಆರ್ಡರ್ ಮಾಡಲಾಗಿದೆ ಎಂದು ಮಾಹಿತಿ ಸದನದಲ್ಲಿ ನೀಡಿದರು.
ಸದ್ಯಕ್ಕೆ ಕೊರೊನಾಗೆ ಔಷಧ ಇಲ್ಲ. ಈ ಸೋಂಕಿಗೆ ಔಷಧಿ ಕಂಡು ಹಿಡಿಯುವ ಕೆಲಸ ನಡೆಯುತ್ತಿದೆ. ರಾಜ್ಯದಲ್ಲಿ ವೆಂಟಿಲೇಟರ್ ವ್ಯವಸ್ಥೆ ಪಡೆದ ಕೊರೊನಾ ಸೋಂಕಿತರು ಯಾರೂ ಇಲ್ಲ. ಇದುವರೆಗೂ ಯಾರಿಗೂ ವೆಂಟಿಲೇಟರ್ ಹಾಕುವ ಅಗತ್ಯ ಬಂದಿಲ್ಲ. ಸೋಂಕಿತರು ಸಾಮಾನ್ಯ ಚಿಕಿತ್ಸೆ ಪಡೆದು ಗುಣಮುಖ ಆಗುತ್ತಿದ್ದಾರೆ. ಪ್ರಸಕ್ತ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ 700 ವೆಂಟಿಲೇಟರ್ ಇದೆ ಎಂದು ತಿಳಿಸಿದರು.
You must be logged in to post a comment.