
ಧರ್ಮಸ್ಥಳ: ಬೇಸಿಗೆಯ ಬಿಸಿಲಿನ ತೀವ್ರತೆಯಿಂದಾಗಿ ಧರ್ಮಸ್ಥಳ ಕ್ಷೇತ್ರದಲ್ಲಿ ನೀರಿನ ಅಭಾವ ಹೆಚ್ಚಾಗಿದ್ದು, ಕ್ಷೇತ್ರಕ್ಕೆ ಬರುವವರು ಕೆಲವು ದಿನ ಬಿಟ್ಟು ಬರಲು ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಲಾಗಿದ್ದು, ಬೇಸಿಗೆಯ ತೀವ್ರತೆಗೆ ದೇಶಾದ್ಯಂತ ನೀರಿನ ಅಭಾವವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ನೀರಿಗಾಗಿ ಜನರು ತುಂಬಾ ಕಷ್ಟಪಡುತ್ತಿದ್ದಾರೆ.

ಒಂದೆಡೆ ಜಿಲ್ಲೆಯಲ್ಲಿ ರೇಶನ್ ಮೂಲಕ ಜಿಲ್ಲಾಡಳಿತವು ನೀರನ್ನು ಪೂರೈಸುತ್ತಿದ್ದು, ವಾರಕ್ಕೆ ಎರಡು – ಮೂರು ದಿನಕ್ಕೊಮ್ಮೆ ಮಾತ್ರ ನೀರು ದೊರೆಯುತ್ತಿದೆ. ಇನ್ನೊಂದೆಡೆ ಧರ್ಮಸ್ಥಳದಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿರುವ ಹಿನ್ನಲೆಯಲ್ಲಿ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತಾದಿಗಳು ತಮ್ಮ ಪ್ರವಾಸವನ್ನು ಮುಂದೂಡಲು ಧರ್ಮಸ್ಥಳ ಆಡಳಿತ ಮಂಡಳಿಯು ಮನವಿ ಮಾಡಿದೆ.
ಧರ್ಮಸ್ಥಳಕ್ಕೆ ಬರುವ ಯಾತಾರ್ಥಿಗಳ ಉಪಯೋಗಕ್ಕೆ ಅಧಿಕ ಪ್ರಮಾಣದ ನೀರು ಬೇಕಾಗುತ್ತಿದ್ದು, ಈ ಕಾರಣಕ್ಕಾಗಿ ಭಕ್ತಾಧಿಗಳು ಹಾಗೂ ಪ್ರವಾಸಿಗರು ತಮ್ಮ ಪ್ರವಾಸವನ್ನು ಕೆಲವು ದಿನಗಳ ಕಾಲ ಮುಂದೂಡಿ ಸಹಕರಿಸುವಂತೆ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಮನವಿ ಮಾಡಿದ್ದಾರೆ.