‘ಏರೋ ಇಂಡಿಯಾ’ದಲ್ಲಿ ಬೆಂಕಿ ದುರಂತ: ಲಕ್ಷಾಂತರ ಮೌಲ್ಯದ 300ಕ್ಕೂ ಹೆಚ್ಚು ಕಾರುಗಳು ಭಸ್ಮ

ಬೆಂಗಳೂರು: ಏರೋ ಇಂಡಿಯಾ ಪ್ರದರ್ಶನ ನಡೆಯುತ್ತಿರುವ ಯಲಹಂಕ ವಾಯುನೆಲೆಯಲ್ಲಿ ವಾಹನಗಳ ನಿಲುಗಡೆ ಸ್ಥಳದಲ್ಲಿ ಶನಿವಾರ ಅಂದಾಜು 300ಕ್ಕೂ ಹೆಚ್ಚು ಕಾರುಗಳಿಗೆ ಬೆಂಕಿ ಹೊತ್ತಿಕೊಂಡು ಭಾರಿ ಅವಘಡ ಸಂಭವಿಸಿದೆ.

ಏರೋ ಶೋ ವೀಕ್ಷಣೆಗೆ ಬಂದಿದ್ದ ಜನರು ಕಾರುಗಳನ್ನ ಪಾರ್ಕಿಂಗ್ ಮಾಡಿ ಹೋಗಿದ್ದರು. ಪಾರ್ಕಿಂಗ್ ಮಾಡಿದ ಸ್ಥಳದಲ್ಲಿ ಒಣ ಹುಲ್ಲಿಗೆ ಬೆಂಕಿಯ ಕಿಡಿ ತಾಗಿ ಕಾರೊಂದು ಹೊತ್ತಿ ಉರಿದು ಈ ಅನಾಹುತ ಸಂಭವಿಸಿದೆ ಎನ್ನಲಾಗುತ್ತಿದೆ. ಆದರೆ ಘಟನೆಗೆ ಸರಿಯಾದ ಕಾರಣ ಇನ್ನೂ ತಿಳಿದು ಬಂದಿಲ್ಲ.

ಈ ದುರ್ಘಟನೆಯಲ್ಲಿ ಲಕ್ಷಂತಾರ ರೂಪಾಯಿ ಬೆಲೆ ಬಾಳುವ ಕಾರುಗಳು ಹಾಗೂ ಬೈಕ್​ಗಳು ಸುಟ್ಟು ಕರಕಲಾಗಿವೆ. ಬೇರೆ ರಾಜ್ಯಗಳ ತೀವ್ರ ವಿರೋಧದ ನಡುವೆಯೂ ಏರೋ ಶೋ ನಡೆಸುವ ಸೌಭಾಗ್ಯ ಬೆಂಗಳೂರಿಗೆ ಸಿಕ್ಕಿತ್ತು. ಆದರೆ ಈ ಬಾರಿಯ ಏರೋ ಶೋಗೆ ಕಪ್ಪು ಛಾಯೆ ಆವರಿಸಿದೆ.

ಇನ್ನು ಏರೋ ಶೋ-2019 ಆರಂಭಕ್ಕೆ ಒಂದು ದಿನ ಮುಂಚೆ ‘ಸೂರ್ಯಕಿರಣ’ ವಿಮಾನಗಳ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಓರ್ವ ಪೈಲಟ್​ ಸಾವನ್ನಪ್ಪಿದ್ರು. ಅಲ್ಲದೇ ಘಟನೆಯಲ್ಲಿ ಇಬ್ಬರು ಪೈಲಟ್​ಗಳು ಗಂಭೀರವಾಗಿ ಗಾಯಗೊಂಡಿದ್ದರು.

ಈ ಘಟನೆಯಿಂದ ಏರೋ ಶೋ ನಡೆಯುತ್ತೋ ಇಲ್ಲವೋ ಅನ್ನೋ ಅನುಮಾನ ಕಾಡಿತ್ತು. ಕೊನೆಗೂ ನಿಗದಿಯಂತೆ ಏರೋ ಶೋ ಸ್ಟಾರ್ಟ್​ ಆಗಿತ್ತು. ಎಲ್ಲವೂ ಸುಸೂತ್ರವಾಗಿ ನಡೆಯವ ಹೊತ್ತಿನಲ್ಲಿ ಏರೋ ಶೋ ಕೊನೆಗಳ್ಳಲು ಎರಡು ದಿನ ಬಾಕಿ ಇರುವಾಗಲೇ ಮತ್ತೊಂದು ಅವಘಡ ಸಂಭವಿಸಿದೆ.

Leave a Comment

Scroll to Top