ಮಂಗಳೂರು: ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಕಾಣಿಸಿಕೊಂಡ ಮೇಲ್ಮೆ ಸುಳಿಗಾಳಿ ಪರಿಣಾಮ, ಸುಬ್ರಹ್ಮಣ್ಯ ಹಾಗು ಜಿಲ್ಲೆಯ ಅನೇಕ ಕಡೆಗಳಲ್ಲಿ ಶುಕ್ರವಾರ ಉತ್ತಮ ಮಳೆಯಾಗಿದೆ.
ಸುಬ್ರಹ್ಮಣ್ಯ, ಕಡಬ ಮತ್ತು ಸುತ್ತಲ ಪ್ರದೇಶಗಳಲ್ಲಿ ಶುಕ್ರವಾರ ಸಂಜೆ ವೇಳೆಗೆ ಗುಡುಗು-ಮಿಂಚು ಸಹಿತ ಭಾರೀ ಗಾಳಿ ಮಳೆಯಾಗಿದೆ. ಜತೆಗೆ ಆಲಿಕಲ್ಲು ಕೂಡ ಬೃಹತ್ ಪ್ರಮಾಣದಲ್ಲಿ ಬಿದ್ದಿವೆ. ಗಾಳಿ ಕೂಡ ಹೆಚ್ಚಿದ್ದು, ಬಿರುಸಾಗಿ ಬೀಸಿದ ಗಾಳಿಗೆ ಹಲವೆಡೆ ಮರಗಳು ಧರೆಶಾಯಿಯಾಗಿವೆ. ಅನೇಕ ಮಂದಿ ಕೃಷಿಕರ ರಬ್ಬರ್, ತೆಂಗು, ಅಡಿಕೆ ಮರ ಗಳು ನೆಲಕ್ಕುರುಳಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.
ಸತತ ಎರಡು ತಾಸು ಕಾಲ ನಿರಂತರ ಮಳೆಯಾಗಿದೆ. ಸುಬ್ರಹ್ಮಣ್ಯ ಆಸುಪಾಸಿನ ಭಾಗದಲ್ಲಿ ಬೇಸಗೆಯ ಈ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಗಾಳಿ ಮಳೆಯಾಗಿದ್ದು ಬಿಸಿಲ ತಾಪದಿಂದ ಕಾದಿದ್ದ ಇಳೆ ತಂಪಾಗಿದೆ. ಹಲವು ಮಂದಿ ಆಲಿಕಲ್ಲುಗಳನ್ನು ಸಂಗ್ರಹಿಸುತ್ತ, ಇನ್ನೂ ಕೆಲವರು ಮೊಬೈಲ್‌ಗಳಲ್ಲಿ ಚಿತ್ರೀಕರಣ ಮಾಡುತ್ತ ಖುಶಿಪಟ್ಟರು.