ಕೊಡಗಿನಲ್ಲಿ ಮತ್ತೆ ಧಾರಾಕಾರ ಮಳೆ: ‘ರೆಡ್‌ ಅಲರ್ಟ್‌’ ಘೋಷಣೆ

ಕೊಡಗು: ಕೊಡಗು ಜಿಲ್ಲೆಯಲ್ಲಿ ಮಳೆಯ ಅಬ್ಬರ ಮತ್ತೆ ಮುಂದುವರೆದಿದ್ದು, ಕಾವೇರಿ ನದಿಯಲ್ಲಿ ಪ್ರವಾಹ ಉಂಟಾಗಿದೆ. ಭಾಗಮಂಡಲದಲ್ಲಿ ಕಾವೇರಿ ನದಿಯ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ.

ನಿರಂತರ ಮಳೆಯಿಂದಾಗಿ ಜನರು ಹೊರಗೆ ಬಾರದಂತಹ ಸ್ಥಿತಿ ನಿರ್ಮಾಣವಾಗಿದೆ. ಹಲವೆಡೆ ಗುಡ್ಡ ಕುಸಿದಿದೆ. ಮಾಕುಟ್ಟದಲ್ಲಿ ಸೇತುವೆ ಕುಸಿದ ಪರಿಣಾಮ ಕೇರಳ ಕೊಡಗು ಸಂಚಾರ ರದ್ದಾಗಿದೆ.

ಭಾರೀ ಮಳೆಗೆ ಭಾಗಮಂಡಲ ತ್ರಿವೇಣಿ ಸಂಗಮ ಭರ್ತಿಯಾಗಿದೆ. ಭಾಗಮಂಡಲ ನಾಪೋಕ್ಲು ರಸ್ತೆಗೆ ನೀರು ನುಗ್ಗಿದ್ದು, ನಾಪೋಕ್ಲು-ಭಾಗಮಂಡಲ ಸಂಪರ್ಕ ಕಡಿತವಾಗುವ ಸಾಧ್ಯತೆ ಇದೆ. ಇನ್ನು ಕೊಡಗಿನಲ್ಲಿ ಮತ್ತೆ ಭಾರಿ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದ್ದು ಆ.7ರಿಂದ 9ರ ವರೆಗೆ ‘ರೆಡ್‌ ಅಲರ್ಟ್‌’ ಘೋಷಿಸಲಾಗಿದೆ.

‘ರೆಡ್‌ ಅಲರ್ಟ್‌’ ವೇಳೆ 204 ಮಿ.ಮೀಗಿಂತ ಅಧಿಕ ಮಳೆ ಬೀಳುವ ಸಾಧ್ಯತೆಯಿದೆ. ಹಾಗೆಯೇ, ಮಂಗಳವಾರ (ಆ.6ರಂದು) 115 ಮಿ.ಮೀನಿಂದ 204 ಮಿ.ಮೀ ವರೆಗೆ ಮಳೆ ಸುರಿಯಲಿದ್ದು ‘ಆರೆಂಜ್‌ ಅಲರ್ಟ್‌’ ಘೋಷಿಸಲಾಗಿದೆ. ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಜಿಲ್ಲಾಡಳಿತ ಮನವಿ ಮಾಡಿದೆ.

Scroll to Top