ಬೆಂಗಳೂರು: 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಎಚ್.ಎಸ್.ವೆಂಕಟೇಶ್ ಮೂರ್ತಿ ಆಯ್ಕೆಯಾಗಿದ್ದಾರೆ.
ಇಂದು ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನುಬಳಿಗಾರ್ ಈ ಘೋಷಣೆ ಮಾಡಿದ್ದಾರೆ. ಈ ಬಾರಿ 2020ರ ಫೆಬ್ರವರಿ 5, 6, 7ರಂದು ಕಲಬುರಗಿಯಲ್ಲಿ ಸಾಹಿತ್ಯ ಸಮ್ಮೇಳನ ನಡೆಯಲಿದೆ.
ಕಸಾಪ ಕಾರ್ಯಕಾರಿಣಿಯಲ್ಲಿ ಹಲವು ಹೆಸರುಗಳು ಚರ್ಚೆಗೆ ಬಂದಿದ್ದವು. ಆದರೂ ಒಮ್ಮತದಿಂದ ಎಚ್.ಎಸ್.ವೆಂಕಟೇಶ್ ಮೂರ್ತಿ ಆಯ್ಕೆಯಾಗಿದ್ದಾರೆ ಎಂದು ಮನುಬಳಿಗಾರ್ ತಿಳಿಸಿದ್ದಾರೆ.
ಎಚ್.ಎಸ್.ವೆಂಕಟೇಶಮೂರ್ತಿ ಯವರ ಬಾಲ್ಯದ ಹೆಸರು ‘ಶ್ರೀನಿವಾಸ’. ‘ವೆಂಕಟೇಶಮೂರ್ತಿಯವರು 1944 ಜೂನ್ 23 ರಂದು ಶಿವಮೊಗ್ಗ ಜಿಲ್ಲೆಯ ಹೊದಿಗ್ಗೆರೆ ಗ್ರಾಮದಲ್ಲಿ ಜನಿಸಿದರು. ತಂದೆ ನಾರಾಯಣ ಭಟ್ಟರು ಮತ್ತು ತಾಯಿ ನಾಗರತ್ನಮ್ಮ. ನಾಗರತ್ನಮ್ಮನವರು ಶಿಕ್ಷಕಿಯಾಗಿದ್ದರು.
ಎಚ್.ಎಸ್.ವೆಂಕಟೇಶಮೂರ್ತಿ ಯವರು ಕವಿತೆ, ನಾಟಕ, ಪ್ರಬಂಧ, ಕಾದಂಬರಿ, ಮಕ್ಕಳ ಸಾಹಿತ್ಯ, ಅನುವಾದ, ವಿಮರ್ಶೆ ಮೊದಲಾದ ಪ್ರಕಾರಗಳಲ್ಲಿ ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಈಗ ಮಕ್ಕಳು, ಯುವಕರು ಮತ್ತು ಮಹಿಳೆಯರಿಗೆ ಬೇಕಾದ ಗೀತೆಗಳನ್ನು ರಚಿಸಿ ಕವಿಯಾಗಿ ಗುರುತಿಸಿಕೊಂಡಿದ್ದಾರೆ.
ಬಿಡುವಿಲ್ಲದ ಬರವಣಿಗೆಯ ನಡುವೆ ಚಲನಚಿತ್ರ ಮತ್ತು ರಂಗಭೂಮಿಯೊಡನೆ ನಿರಂತರ ಸಂಪರ್ಕ ಹೊಂದಿದ್ದಾರೆ. ಚಿನ್ನಾರಿಮುತ್ತ, ಕೊಟ್ರೇಶಿಯ ಕನಸು, ಕ್ರೌರ್ಯ, ಮತದಾನ ಮುಂತಾದ ಚಲನಚಿತ್ರಗಳಿಗೆ ಹಾಡುಗಳನ್ನು ರಚಿಸಿದ್ದಾರೆ, ಕೆಲವು ಚಿತ್ರಗಳಿಗೆ ಸಂಭಾಷಣೆ ಬರೆದಿದ್ದಾರೆ. ಯಾವ ಜನ್ಮದ ಮೈತ್ರಿ, ಸವಿಗಾನ, ಮುಕ್ತ ದಾರಾವಾಹಿಗಳಿಗೆ ಶೀರ್ಷಿಕೆ ಗೀತೆ ಬರೆದಿದ್ದಾರೆ.