ವಿದ್ಯಾರ್ಥಿನಿ ಮಧು ಅನುಮಾನಾಸ್ಪದ ಸಾವು ಪ್ರಕರಣ: ಬೀದಿಗಿಳಿದು ವಿದ್ಯಾರ್ಥಿಗಳಿಂದ ಪ್ರತಿಭಟನೆ:- ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

ರಾಯಚೂರು: ಎಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್ ಅನುಮಾನಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟ ಮಾಡಿದ್ದಾರೆ.

ರಾಯಚೂರು ನಗರದ ಮಾಣಿಕಪ್ರಭು ದೇವಸ್ಥಾನದ ಹಿಂಭಾಗದ ಬೆಟ್ಟದ ಪ್ರದೇಶದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್ ಶವವಾಗಿ ಪತ್ತೆಯಾಗಿದ್ದಳು. ಅಂದು ನೇತಾಜಿ ನಗರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಎಂದು ದಾಖಲಾಗಿದ್ದ ಪ್ರಕರಣ ಈಗ ಟ್ವಿಸ್ಟ್ ಪಡೆದಿದ್ದು ಅತ್ಯಾಚಾರವೆಸಗಿ, ಕೊಲೆ ಎಂದು ಪ್ರಕರಣ ದಾಖಲಾಗಿದೆ.

ಮೃತ ವಿದ್ಯಾರ್ಥಿನಿ ಮಧು ತಾಯಿ ರೇಣುಕಾದೇವಿ ನೀಡಿದ ದೂರಿನ ಮೇರೆಗೆ ಪೊಲೀಸರು ಅತ್ಯಾಚಾರ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಸುದರ್ಶನ್ ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿಯು ಮಧು ಜೊತೆ ತುಂಬಾ ದಿನಗಳಿಂದ ಸ್ನೇಹದಲ್ಲಿದ್ದ ಹಾಗೂ ಇವನ ಮೇಲೆಯೇ ಮಧು ಪೋಷಕರಿಗೆ ಸಂಶಯವಿತ್ತು. ಈ ಅನುಮಾನದ ಮೇಲೆಯೇ ಪೊಲೀಸರು ಅವನನ್ನು ಶವ ಪತ್ತೆಯಾದ ದಿನವೇ ವಶಕ್ಕೆ ಪಡೆದಿದ್ದರು. ಆದ್ರೆ ಬಹಿರಂಗಗೊಳಿಸಿರಲಿಲ್ಲ. ಪೊಲೀಸರ ಈ ವರ್ತನೆ ವಿದ್ಯಾರ್ಥಿ ಸಮುದಾಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಹೀಗಾಗಿ ವಿದ್ಯಾರ್ಥಿನಿ ಮಧು ಪತ್ತಾರ ಆತ್ಮಹತ್ಯೆ ಪ್ರಕರಣದ ಸಮಗ್ರ ತನಿಖೆಗೆ ಆಗ್ರಹಿಸಿ ನಗರದ ನಾನಾ ಕಾಲೇಜುಗಳ ವಿದ್ಯಾರ್ಥಿಗಳು ವಿವಿಧ ಸಂಘಟನೆಗಳ ಆಶ್ರಯದಲ್ಲಿ ಗುರುವಾರ ಬೃಹತ್‌ ಪ್ರತಿಭಟನೆ ನಡೆಸಿದ್ದಾರೆ. ಸಾಮಾಜಿಕ ತಾಣಗಳಲ್ಲಿ #JusticeForMadhu ಎಂಬ ಅಭಿಯಾನವನ್ನು ಆರಂಭಿಸಿದ್ದಾರೆ.

ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಅನುಮಾನಗಳು ವ್ಯಕ್ತವಾಗಿದ್ದರು, ಮಧು ಪತ್ತಾರ ಅನುಮಾನಸ್ಪದ ಸಾವನ್ನು ಮಾಧ್ಯಮ ನಿರ್ಲಕ್ಷಿಸುತ್ತಿದೆ ಎಂದು ಸಾಮಾಜಿಕ ತಾಣಗಳಲ್ಲಿ ನೆಟ್ಟಿನಗರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಏನಿದು ಘಟನೆ:

ನಗರದ ನವೋದಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಐದನೇ ಸೆಮಿಸ್ಟರ್ ಸಿವಿಲ್ ಇಂಜಿನಿಯರಿಂಗ್ ಓದುತ್ತಿದ್ದ ನಗರದ ಐಡಿಎಸ್ ಎಂಟಿ ಬಡಾವಣೆ ನಿವಾಸಿ ಮಧು ಪತ್ತಾರ್ ಏಪ್ರಿಲ್ 13 ರಂದು ಕಾಣೆಯಾಗಿದ್ದಳು‌. ಪೋಷಕರು ಗೊತ್ತಿರುವ ಎಲ್ಲಾ ಕಡೆ ಹುಡುಕಾಡಿ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಆದ್ರೆ ಮಧು ಸುಳಿವು ಮಾತ್ರ ಸಿಕ್ಕಿರಲಿಲ್ಲ. ಮಧು ಸಹೋದರಿ ತನ್ನ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿರುವಂತೆ ಏಪ್ರಿಲ್ 17ಕ್ಕೆ ಮಧು ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಬೇಕಾಗಿತ್ತು, ಆದ್ರೆ ಏಪ್ರಿಲ್ 16 ಕ್ಕೆ ಮಧು ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳು.

Scroll to Top