ವಲಸೆ ಕಾರ್ಮಿಕರಿಗೆ ಗುಡ್​ನ್ಯೂಸ್: ಇಂದಿನಿಂದ 3 ದಿನ ಕೆಎಸ್​ಆರ್​ಟಿಸಿ ಬಸ್​ಗಳಲ್ಲಿ ಉಚಿತ ಪ್ರಯಾಣ

ಬೆಂಗಳೂರು: ಕಾರ್ಮಿಕರು, ಬಡ ಕೂಲಿ ಕಾರ್ಮಿಕರು, ಇಂದಿನಿಂದ ಮಂಗಳವಾರದವರೆಗೆ ಕೆಎಸ್.ಆರ್.ಟಿಸಿ ಬಸ್’ಗಳಲ್ಲಿ ಬೆಂಗಳೂರು ಮತ್ತು ಜಿಲ್ಲಾ ಕೇಂದ್ರಗಳಿಂದ ತಮ್ಮ ಊರುಗಳಿಗೆ ಉಚಿತವಾಗಿ ತೆರಳಲು ರಾಜ್ಯ ಸರ್ಕಾರ ಅನುವು ಮಾಡಿಕೊಟ್ಟಿದೆ. ತಮ್ಮ ಊರಿಗಳಿಗೆ ಹೋಗುತ್ತಿದ್ದ ವಲಸೆ ಕಾರ್ಮಿಕರಿಂದ ಹಣ ಪಡೆಯುತ್ತಿದ್ದ ಸರ್ಕಾರ ಈಗ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದೆ.

ಲಾಕ್ ಡೌನ್ ಘೋಷಿಸಿದಾಗಿನಿಂದ ನಗರ ಹಾಗೂ ಇತರ ಭಾಗಗಳಲ್ಲಿ ಸಿಲುಕಿರುವ ಕೂಲಿ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ವಾಪಸ್ ಹೋಗಲು ಆಗದೇ ಹತಾಶರಾಗಿದ್ದಾರೆ. ಮೇ 17ರವರೆಗೆ ಲಾಕ್ ಡೌನ್ ಮುಂದುವರಿಸಲು ನಿಶ್ಚಯಿಸಿರುವುದರಿಂದ ಈ ಕಾರ್ಮಿಕರಿಗೆ ಅವವರ ಊರುಗಳಿಗೆ ಹೋಗಲು ಸರ್ಕಾರ ಅವಕಾಶ ಕಲ್ಪಿಸಿದೆ. ಇವತ್ತಿನಿಂದ ಮಂಗಳವಾರದವರೆಗೆ ಕೂಲಿ ಕಾರ್ಮಿಕರಿಗೆ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣಿಸಲು ವ್ಯವಸ್ಥೆ ಮಾಡಲಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ನಿರ್ಧಾರ ಘೋಷಿಸಿದ್ಧಾರೆ.

ರಾಜ್ಯ ಸರಕಾರ 3 ದಿನಗಳ ಕಾಲ ಅಂದರೆ ಮಂಗಳವಾರದವರೆಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಿದೆ. ಜಿಲ್ಲಾ ಕೇಂದ್ರಗಳಿಂದ ಮತ್ತು ರಾಜಧಾನಿ ಬೆಂಗಳೂರಿನಿಂದ ಕರ್ನಾಟಕದ ತಮ್ಮ ತಮ್ಮ ಊರುಗಳಿಗೆ ಹೋಗುವ ಎಲ್ಲರಿಗೂ ಉಚಿತವಾಗಿ ಕೆಎಸ್​ಆರ್​ಟಿಸಿ ಬಸ್​ಗಳಲ್ಲಿ ತೆರಳಲು ಅನುವು ಮಾಡಿಕೊಡಲಾಗಿದೆ. ಅಲ್ಲದೆ ಕಾರ್ಮಿಕರಿಗೆ ಉಚಿತವಾಗಿ ಊಟದ ವ್ಯವಸ್ಥೆಯನ್ನು ಮಾಡುತ್ತಿದೆ. ಇದೇ ವೇಳೆ ಕಾರ್ಮಿಕರ ಆರೋಗ್ಯವನ್ನು ತಪಾಸಣೆ ನಡೆಸಿ ಅವರ ಊರುಗಳಿಗೆ ಕಳುಹಿಸಿಕೊಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕೆಎಸ್‍ಆರ್‍ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಎಂ ಕಳಸದ್, ಸಾರಿಗೆ ನಿಗಮದಿಂದ ಕಾರ್ಮಿಕರಿಗೆ ಇಂದಿನಿಂದ 3 (ಮಂಗಳವಾರ) ದಿನಗಳವರೆಗೆ ಮೂರು ದಿನಗಳ ಕಾಲ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ಹಾಗೂ ರಾಜ್ಯ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ್‍ಭಾಸ್ಕರ್ ಅವರ ನಿರ್ದೇಶನದ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

Leave a Comment

Scroll to Top