ಚಿತ್ರದುರ್ಗ: ಸಾಹಸಕ್ಕೆ ಹೆಸರಾದ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ತನ್ನ ಮನದಾಸೆಯನ್ನು ಈಡೇರಿಸಿಕೊಳ್ಳಲು ಅಪಾಯಕಾರಿ ಸಾಹಸಕ್ಕೆ ಕೈ ಹಾಕಿದ್ದಾರೆ. ಅಮೇರಿಕಾದ ವೆನ್ನಿಸ್ಲಾದಲ್ಲಿರುವ ವಿಶ್ವದ ಅತೀ ಎತ್ತರದ ಏಂಜಲ್ ಫಾಲ್ಸ್ ಏರಲು ನಿರ್ಧರಿಸಿದ್ದಾರೆ.
ಇದುವರೆಗೂ ಏಂಜಲ್ ಫಾಲ್ಸ್ ಸಂಪೂರ್ಣವಾಗಿ ಹತ್ತಿದವರೇ ಇಲ್ಲ. ಡಾಕ್ಯುಮೆಂಟರಿ ಮೂಲಕ ಏಂಜಲ್ ಫಾಲ್ಸ್ ಏರಿ ವಿಶ್ವದಾಖಲೆ ನಿರ್ಮಿಸಲು ಕೋತಿರಾಜ್ ಮುಂದಾಗಿದ್ದಾರೆ. ಕೋತಿರಾಜನ ಸಾಹಸ ನೋಡಿ ಆತನ ಆತ್ಮಕಥೆಯನ್ನ ಡ್ಯಾಕ್ಯುಮೆಂಟರಿ ಮಾಡಲು ಹಾಲಿವುಡ್ ನಿರ್ದೇಶಕ ಡೇನ್ಲಿ ಜೋಸೇಫ್ ನಿರ್ಧರಿಸಿದ್ದಾರೆ. ಡ್ಯಾಕ್ಯುಮೆಂಟರಿ ಸಿನೆಮಾದಿಂದ ಬರುವ ಹಣವನ್ನು ಚಿತ್ರದುರ್ಗದ ಕೋಟೆ ಅಭಿವೃದ್ಧಿ, ಯುವ ಕ್ರೀಡಾಪಟುಗಳ ಭವಿಷ್ಯಕ್ಕೆ ಬಳಸುವುದಾಗಿ ಕೋತಿರಾಜ್ ಹೇಳಿದ್ದಾರೆ.
ಅಲ್ಲದೆ ಸರ್ಕಾರದಿಂದ ಚಿತ್ರದುರ್ಗದ ಅಭಿವೃದ್ಧಿಗೆ ಯಾವುದೇ ಪ್ರಯೋಜನಗಳು ಆಗಿಲ್ಲ. ಆದ್ದರಿಂದ ನಾನು ಮುಂಬರುವ ಫೆಬ್ರವರಿಯ 26 ಮತ್ತು 27 ರಂದು ಜಗತ್ತಿನ ಅತಿ ಎತ್ತರದ ಅಮೆರಿಕದ 3,221 ಅಡಿ ಎತ್ತರದ ಏಂಜಲ್ ಫಾಲ್ಸ್ ಏರುತ್ತಿದ್ದು, ಅದರಲ್ಲಿ ಬರುವ ಹಣವನ್ನು ಕೋಟೆಯ ಅಭಿವೃದ್ಧಿಗೆ ಹಾಗೂ ನನ್ನ ಶಿಷ್ಯರ ಜೀವನೋಪಾಯಕ್ಕೆ ಬಳಕೆ ಮಾಡುವುದಾಗಿ ತಿಳಿಸಿದರು.
ಆ ದಿನ ನಾನು ಬದುಕುವುದು ಬಹಳ ಕಷ್ಟ ಹಾಗಾಗಿ ನಾನೊಂದು ವೇಳೆ ಸತ್ತರೆ, ಕನ್ನಡಿಗರೆಲ್ಲಾ ಒಂದು ಹಿಡಿ ಮಣ್ಣು ಹಾಕಿ. ಕಾರಣ ನಾನು ಸಂಪಾದನೆ ಮಾಡಿರುವುದು ಕನ್ನಡಿಗರ ಪ್ರೀತಿ ಮಾತ್ರ ಅಲ್ಲದೆ ಬೇರೇನೂ ಅಲ್ಲ. ಕನ್ನಡ ನಾಡಿಗಾಗಿ ಮಹಾನ್ ಸಾಧನೆ ಮಾಡಲು ಹೊರಟಿರುವೆ. ನನ್ನನ್ನು ಹರಸಿ ಆಶೀರ್ವದಿಸಿ ಎಂದು ಭಾವುಕರಾಗಿ ಕೋತಿರಾಜ್ ತಮ್ಮ ಮನದಾಳ ಮಾತನ್ನು ಹಂಚಿಕೊಂಡಿದ್ದಾರೆ.