ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಜನಕ ಪಾಂಡಂಡ ಕುಟ್ಟಣಿ ಕುಟ್ಟಪ್ಪ(86) ಇನ್ನಿಲ್ಲ

ಬೆಂಗಳೂರು: ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಜನಕ ಪಾಂಡಂಡ ಕುಟ್ಟಣಿ ಕುಟ್ಟಪ್ಪ(86) ಅವರು ಬೆಂಗಳೂರಿನ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ.

ಕೊಡಗಿನಲ್ಲಿ ಹಾಕಿ ಪಂದ್ಯಾಟಕ್ಕೆ ಕಾಯಕಲ್ಪ ನೀಡಲು ಕೊಡವ ಕುಟುಂಬಗಳ ನಡುವೆ ಹಾಕಿ ಪಂದ್ಯಾಟ ಆಯೋಜಿಸಿದ್ದ ಕುಟ್ಟಪ್ಪ ಅವರು 1997 ಕರಡದಲ್ಲಿ ಮೊದಲ ಪಂದ್ಯಾಟ ನಡೆಸಿದ್ದರು.

ಪ್ರತೀ ವರ್ಷ ಕೊಡಗಿನಲ್ಲಿ 1 ತಿಂಗಳ ಕಾಲ ನಡೆಯುವ ಈ ಕೊಡವ ಹಾಕಿ ಹಬ್ಬ. ಒಲಿಂಪಿಕ್ಸ್ ಮಾದರಿಯಲ್ಲಿ ವಿಶ್ವಾದ್ಯಂತ ಗಮನಸೆಳೆದಿತ್ತು.

ಲಿಮ್ಕಾ ಬುಕ್‌ ರೆಕಾರ್ಡ್‌

ಪಾಂಡಂಡ ಕುಟ್ಟಣಿ ಕುಟ್ಟಪ್ಪ ಅವರು 1997ರಲ್ಲಿ ಕಡಂಗ ಗ್ರಾಮದ ಶಾಲಾ ಮೈದಾನದಲ್ಲಿ ಮೊದಲ ಬಾರಿಗೆ ಕೊಡವ ಕುಟುಂಬಗಳ ನಡುವಿನ ಪಂದ್ಯ ಆಯೋಜಿಸಿದರು. ಒಂದು ಜಿಲ್ಲೆಯಲ್ಲಿ, ಒಂದೇ ಜನಾಂಗದವರು, ಒಂದೇ ಆಟವನ್ನು ಒಂದು ತಿಂಗಳಿನಷ್ಟು ಕಾಲ ಒಂದೇ ಕಡೆ ಆಡುವ ಮೂಲಕ ಹೊಸ ಇತಿಹಾಸವನ್ನೇ ಸೃಷ್ಟಿಸಿದ್ದರು. ಅತ್ಯಧಿಕ ತಂಡಗಳು ಪಾಲ್ಗೊಳ್ಳುವ ಹಾಕಿ ಎಂಬ ಲಿಮ್ಕಾ ಬುಕ್‌ ರೆಕಾರ್ಡ್‌’ಗೂ ಕಾರಣರಾಗಿದ್ದಾರೆ.

ಎಸ್.ಬಿ.ಐ ನ ನಿವೃತ್ತ ಮ್ಯಾನೇಜರ್ ಆಗಿದ್ದ ಕುಟ್ಟಪ್ಪ ಅವರು ಸತತ 22 ವರ್ಷಗಳ ಕಾಲ ಹಾಕಿ ಹಬ್ಬಕ್ಕೆ ಮಾರ್ಗದರ್ಶನ ನೀಡುತ್ತ ಬಂದಿದ್ದರು. ಕುಟ್ಟಪ್ಪನವರ ಆಶಯದಂತೆ ಕೌಟುಂಬಿಕ ಹಾಕಿ ಹಬ್ಬ ಪ್ರತಿ ವರ್ಷ ಯಶಸ್ವಿಯಾಗಿ ನಡೆಯುತ್ತಿದೆ. ಆದರೆ ಕಳೆದ ವರ್ಷ ಮಹಾಮಳೆ ಮತ್ತು ಈ ವರ್ಷ ಕೊರೋನಾದಿಂದಾಗಿ ಹಾಕಿ ಹಬ್ಬ ನಡೆಯಲಿಲ್ಲ.

Scroll to Top