ಬೆಳ್ತಂಗಡಿ: ಪುಣ್ಯಕ್ಷೇತ್ರ ಧರ್ಮಸ್ಥಳದಲ್ಲಿ ಫೆ. 9ರಿಂದ 18ರ ವರೆಗೆ ಮಹಾಮಸ್ತಕಾಭಿಷೇಕ ದ ಸಂಭ್ರಮ. ಮಹಾನ್ ವಿರಾಗಿ ಬಾಹುಬಲಿಗೆ 12 ವರ್ಷಕ್ಕೊಮ್ಮೆ ನಡೆಯುವ ಮಹಾಮಜ್ಜನಕ್ಕೆ ಮಂಜುನಾಥನ ಕ್ಷೇತ್ರ ಸಜ್ಜಾಗಿದೆ.
ಧರ್ಮಸ್ಥಳದ ರತ್ನಗಿರಿಯಲ್ಲಿ ಫೆ.9ರಿಂದ 18ರ ವರೆಗೆ ಸಂತ ಸಮ್ಮೇಳನ ಸೇರಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಬಾಹುಬಲಿಯ ಪ್ರತಿಷ್ಠಾಪಕರಾಗಿರುವ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ವಿ.ಹೆಗ್ಗಡೆಯವರ ನೇತೃತ್ವದಲ್ಲಿ ಮಹಾಮಸ್ತಕಾಭಿಷೇಕದ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಮಹಾಮಜ್ಜನದ ಭಾಗವಾಗಿ ವಿವಿಧ ಜನಮಂಗಲ, ಜನಕಲ್ಯಾಣ ಕಾರ್ಯಕ್ರಮಗಳು ನಾಡಿಗೆ ಸಮರ್ಪಿತವಾಗಲಿವೆ. ನಾಡಿನ ಸುಪ್ರಸಿದ್ಧ ಕಲಾವಿದರಿಂದ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳೂ ಭಕ್ತರ ಕಣ್ಮನ ತಣಿಸಲಿವೆ.
ಫೆ.9ರಂದು ಜನಕಲ್ಯಾಣ ಕಾರ್ಯಕ್ರಮಗಳ ಅಂಗವಾಗಿ ಧರ್ಮಸ್ಥಳ ಸ್ನಾನಘಟ್ಟದಿಂದ ದೇವಸ್ಥಾನದ ವರೆಗೆ ಚತುಷ್ಪಥ ರಸ್ತೆಯ ಪ್ರಥಮ ಹಂತದ ಉದ್ಘಾಟನೆ, ಸ್ಮರಣ ಸಂಚಿಕೆ ಬಿಡುಗಡೆ, ಕೆರೆ ಸಂಜೀವಿನಿ, ವಸ್ತುಪ್ರದರ್ಶನ, ಲೇಸರ್ ಶೋ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ನೆರವೇರಲಿದೆ. ಫೆ.10ರಂದು ಕ್ಷುಲ್ಲಕ ದೀಕ್ಷಾ ಮಹೋತ್ಸವ ಹಾಗೂ ಜನಮಂಗಲ ಕಾರ್ಯಕ್ರಮ ನಡೆಯಲಿದೆ. ಫೆ.14ರಂದು ಗ್ರಂಥಗಳ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.
ಅಮೃತವರ್ಷಿಣಿ ಸಭಾಭವನದ ಬಳಿ ನಿರ್ಮಿಸಿರುವ ಅಯೋಧ್ಯೆ ಮತ್ತು ಪೌದನಾಪುರ ಸಭಾಂಗಣದಲ್ಲಿ ಪಂಚಮಹಾವೈಭವ ಎಂಬ ಪೂಜಾ ಕಾರ್ಯಕ್ರಮಗಳು ಫೆ.11ರಿಂದ 15ರ ವರೆಗೆ ನಡೆಯಲಿವೆ. ಈ ಪೂಜಾ ವೈಭವ ಮೊದಲ ಬಾರಿಗೆ ಧರ್ಮಸ್ಥಳದಲ್ಲಿ ಅನಾವರಣಗೊಳ್ಳಲಿದ್ದು, ಧರ್ಮಾಧಿಕಾರಿಗಳ ಈ ಬಾರಿಯ ಹೊಸ ಪರಿಕಲ್ಪನೆಯಾಗಿದೆ.
ಬಾಹುಬಲಿಗೆ ಫೆ.16, 17 ಮತ್ತು 18ರಂದು ಮಹಾಮಜ್ಜನ ನೆರವೇರಲಿದೆ. 16ರಂದು ಬೆಳಗ್ಗೆ 8.45ಕ್ಕೆ ಬಾಹುಬಲಿ ಪ್ರತಿಷ್ಠಾಪಕರಾದ ಡಿ.ವೀರೇಂದ್ರ ಹೆಗ್ಗಡೆಯವರು ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ 1,008 ಕಲಶಗಳಿಂದ ಮಹಾಮಸ್ತಕಾಭಿಷೇಕ ನೆರವೇರಿಸಲಿದ್ದಾರೆ. 17 ಮತ್ತು 18ರಂದು 1,008 ಕಲಶಗಳಿಂದ ಅಭಿಷೇಕ ನೆರವೇರಲಿದೆ.