ಬೆಂಗಳೂರು: ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ ಜಾರಿಗೊಳಿಸುತ್ತಿರುವ ತಮಗೆ ಬೇಕಾದ ಚಾನಲ್‍ಗಳನ್ನು ಗ್ರಾಹಕರೇ ಆಯ್ಕೆ ಮಾಡುವ ಕೇಬಲ್ ಮತ್ತು ಡಿಟಿಎಚ್ ನೀತಿ ವಿರೋಧಿಸಿ ನಾಳೆ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10ರವರೆಗೆ ಟಿವಿ ಕೇಬಲ್ ಬಂದ್ ಮಾಡಲು ಕೇಬಲ್ ಟಿವಿ ಆಪರೇಟರ್ ಸಂಘಟನೆಗಳು ನಿರ್ಧರಿಸಿವೆ.
ಗ್ರಾಹಕರು ಮತ್ತು ಕೇಬಲ್ ಆಪರೇಟರ್‍ಗಳ ಹಿತದೃಷ್ಟಿಯಿಂದ ದಕ್ಷಿಣ ಭಾರತದಾದ್ಯಂತ ಕೇಬಲ್ ಟಿವಿ ಬಂದ್ ಮಾಡಲು ತೀರ್ಮಾನಿಸಲಾಗಿದೆ. ಹಾಗಾಗಿ ಕರ್ನಾಟಕದಲ್ಲೂ ಅಂದು ಕೇಬಲ್ ಟಿವಿಗಳು ಬಂದ್ ಆಗಲಿವೆ ಎಂದು ಕೇಬಲ್ ಆಪರೇಟರ್ಸ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಪ್ಯಾಟ್ರಿಕ್ ರಾಜು ತಿಳಿಸಿದ್ದಾರೆ.
ದಕ್ಷಿಣ ಭಾರತ ಮಾತ್ರವಲ್ಲದೇ ಉತ್ತರ ಭಾರತದ ಹಲವಾರು ರಾಜ್ಯಗಳಲ್ಲಿ ನಾಳೆ ಕೇಬಲ್ ಟಿವಿ ಆಪರೇಟಿಂಗ್ ಸಿಸ್ಟಂ ಸ್ಥಗಿತಗೊಳಿಸಲಾಗುತ್ತಿದೆ. ಈ ಬಗ್ಗೆ ಈಗಾಗಲೇ ಗ್ರಾಹಕರಿಗೆ ಮಾಧ್ಯಮಗಳ ಮೂಲಕ ಮಾಹಿತಿ ನೀಡಲಾಗಿದೆ. ಒಂದು ದಿನದ ಮಟ್ಟಿಗೆ ಸಾಂಕೇತಿಕವಾಗಿ ಟಿವಿ ಚಾನಲ್ ಬಂದ್ ಮಾಡಲಾಗುತ್ತಿದೆ.
ಕೇಂದ್ರ ಸರ್ಕಾರ ಕೂಡಲೇ ಈ ನೀತಿಯನ್ನು ಹಿಂಪಡೆಯಬೇಕು ಇಲ್ಲವಾದರೆ ಟಿವಿ ಆಪರೇಟರ್‍ಗಳು ತೀವ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ರಾಜ್ಯ ಕೇಬಲ್ ಆಪರೇಟರ್ಸ್ ಅಸೋಸಿಯೇಷನ್ ನಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ನಾಳೆ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆ ವರೆಗೆ ಕೇಬಲ್ ಸ್ಥಗಿತಗೊಳಿಸಲು ಒಮ್ಮತದ ತೀರ್ಮಾನ ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ.
Source: https://www.eesanje.com