ಪೇಜಾವರ ಮಠಾಧೀಶ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಶ್ರೀ ಕೃಷ್ಣನಲ್ಲಿ ವಿಲೀನ

ಉಡುಪಿ: ಶ್ವಾಸಕೋಶ ಉಸಿರಾಟ ಸಮಸ್ಯೆಯಿಂದ ಮಣಿಪಾಲ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ(88) ಅವರು ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಗ್ಗೆ ಪೇಜಾವರ ಮಠದಲ್ಲಿ ಶ್ರೀ ಕೃಷ್ಣನಲ್ಲಿ ಲೀನರಾದರು.

ನ್ಯುಮೋನಿಯಾ (ಶ್ವಾಸಕೋಶ ಉಸಿರಾಟ ಸಮಸ್ಯೆ)ಯಿಂದಾಗಿ ಡಿ.20 ಶುಕ್ರವಾರ ಮುಂಜಾನೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಶ್ರೀಗಳನ್ನು ದಾಖಲಿಸಲಾಗಿತ್ತು. ತಜ್ಞ ವೈದ್ಯರ ತಂಡ ಶ್ರೀಗಳಿಗೆ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡುತಿದ್ದರು. ಕಳೆದ ಎಂಟು ದಿನಗಳ ನಡುವೆ ಆರೋಗ್ಯ ತುಸು ಚೇತರಿಕೆ ಕಂಡಿದ್ದರೂ ಕೃತಕ ಉಸಿರಾಟ ಮೂಲಕ ಗಂಭೀರ ಸ್ಥಿತಿಯಲ್ಲೆ ಚಿಕಿತ್ಸೆ ಮುಂದುವರೆಸಲಾಗಿತ್ತು.

ಆದರೆ, ಶುಕ್ರವಾರ ಮತ್ತು ಶನಿವಾರ ಶ್ರೀಗಳ ದೇಹ ಸ್ಥಿತಿ ಚಿಂತಾಜನಕವಾಗಿತ್ತು. ಶನಿವಾರ ಸಾಯಂಕಾಲ ಮಿದುಳು ಸರಿಯಾಗಿ ಕಾರ್ಯನಿರ್ವಹಿಸದ ಬಗ್ಗೆ ವೈದ್ಯರು ತಿಳಿಸಿದ್ದರು. ಪೇಜಾವರ ಕಿರಿಯ ಶ್ರೀಗಳು ಗುರುಗಳ ಆರೋಗ್ಯ ಸುಧಾರಣೆ ಕಂಡಿಲ್ಲ. ಅವರ ಇಚ್ಛೆಯಂತೆ ಮಠಕ್ಕೆ ಕರೆದುಕೊಂಡು ಹೋಗುವುದಾಗಿ ಶನಿವಾರ ತಿಳಿಸಿದ್ದರು.

ಶ್ರೀಗಳ ಆಸೆಯಂತೆ ಭಾನುವರ ಬೆಳಗ್ಗೆ ‌6:55 ಗಂಟೆಗೆ ತಜ್ಞ ವೈದ್ಯಕೀಯ ತಂಡ, ಬಿಗು ಪೊಲೀಸ್ ಭದ್ರತೆಯಲ್ಲಿ ಶ್ರೀಗಳನ್ನು ಮಣಿಪಾಲದಿಂದ ಐದು ಕಿಲೋಮೀಟರ್ ದೂರದಲ್ಲಿರುವ ಪೇಜಾವರ ಮಠಕ್ಕೆ ಕರೆತರಲಾಗಿತ್ತು.

Scroll to Top