ಕೊಡಗು: ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಡಿಕೆ ಮುಂದಿಟ್ಟುಕೊಂಡು ಕೊಡಗಿನಲ್ಲಿ ಟ್ವಿಟರ್ ಅಭಿಯಾನ ಆರಂಭವಾಗಿದೆ.
ನಮ್ಮಲ್ಲಿ ಐಶಾರಾಮಿ ರೆಸಾರ್ಟ್, ಹೋಮ್ ಸ್ಟೇ ಇದೆ. ಆದ್ರೆ ಸುಸಜ್ಜಿತ ಆಸ್ಪತ್ರೆ ಇಲ್ಲ #WeNeedEmergencyHospitalInKodagu ಎಂದು ಅಭಿಯಾನ ಆರಂಭವಾಗಿದೆ.
ಅಪಘಾತವಾದರೆ ತಕ್ಷಣ ಚಿಕಿತ್ಸೆ ಪಡೆಯಲು ಕೊಡಗಿನಲ್ಲಿ ಒಂದು ಉತ್ತಮ ಅಸ್ಪತ್ರೆಯಿಲ್ಲ. ಅದ್ದರಿಂದ ನಮಗೆ ಹೈಟೆಕ್ ಅಸ್ಪತ್ರೆ ಬೇಕೆಂದು ಸಂಸದ ಪ್ರತಾಪ್ ಸಿಂಹ, ಸಿಎಂ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ಯಾಗ್ ಮಾಡಿ ಬೇಡಿಕೆ ಇಡುತ್ತಿದ್ದಾರೆ.
ಕೊಡಗಿನಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವಲ್ಲಿ ನಮ್ಮ ಸರ್ಕಾರವು ಉತ್ಸುಕವಾಗಿದೆ. ಆದರೆ ಜಿಲ್ಲೆಯಲ್ಲಿ ನಡೆಯುವ ತೀವ್ರ ಅಪಘಾತಗಳು ಮತ್ತು ಹೃದಯಾಘಾತವಾದರೆ ಚಿಕಿತ್ಸೆ ಪಡೆಯಲು ಕೊಡಗಿನಲ್ಲಿ ಒಂದೇ ಆಸ್ಪತ್ರೆಯೂ ಇಲ್ಲ. ಒಂದೋ ಮಂಗಳೂರಿಗೆ ಹೋಗಬೇಕು. ಇಲ್ಲದೇ ಇದ್ದರೆ ಮೈಸೂರಿಗೆ ಹೋಗಬೇಕು. ಒಂದು ಜಿಲ್ಲೆಯಾಗಿ ರೂಪುಗೊಂಡರೂ ಇನ್ನು ಸುಸಜ್ಜಿತವಾದ ಆಸ್ಪತ್ರೆ ನಿರ್ಮಾಣವಾಗಿಲ್ಲ ಯಾಕೆ ಎಂದು ಜನರು ಜನಪ್ರತಿನಿಧಿಗಳಿಗೆ ಪ್ರಶ್ನೆ ಮಾಡಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಸ್ಯಾಂಡಲ್’ಹುಡ್ ಬೆಂಬಲ:
ಕೊಡಗಿನಲ್ಲಿ ಸುಸಜ್ಜಿತ ಆಸ್ಪತ್ರೆಗೆ ಕೊರತೆ ನೀಗಿಸುವಂತೆ ಶುರುವಾಗಿರುವ ಟ್ವಿಟ್ಟರ್ ಅಭಿಯಾನಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅವರು ಬೆಂಬಲ ನೀಡಿದ್ದಾರೆ.
ಕೊಡಗು ಬಗ್ಗೆ ನಮಗೆ ಹೆಮ್ಮೆಯಿದೆ. ಕೊಡಗಿಗೆ ಸುಸಜ್ಜಿತ ಆಸ್ಪತ್ರೆ ಇಲ್ಲವೆಂದು ಕೇಳಲ್ಪಟ್ಟೆ. ನೀವ್ಯಾರೂ ನೊಂದುಕೊಳ್ಳುವ ಅಗತ್ಯ ಇಲ್ಲ. ನಾವೆಲ್ಲಾ ನಿಮ್ಮ ಜೊತೆಗಿದ್ದೇವೆ. ಚಿತ್ರರಂಗದಿಂದ ಸರ್ಕಾರಕ್ಕೆ ಒತ್ತಾಯಪಡಿಸುತ್ತೇವೆ. ನೀವು ಹೆದರಬೇಡಿ. ನಾವಿದ್ದೇವೆ ಎಂದು” ಶಿವಣ್ಣ ಕೊಡಗಿನ ಜನತೆಗೆ ಹೇಳಿದ್ದಾರೆ.
ಇನ್ನು ಕೊಡಗಿನವರೇ ಆದ ರಶ್ಮಿಕಾ ಮಂದಣ್ಣ ನಟ ಭುವನ್, ನಟಿಯರಾದ ದಿಶಾ ಪೂವಯ್ಯ, ಹರ್ಷಿಕಾ ಪೂಣಚ್ಚ ಅವರೂ ಸಹ ಅಭಿಯಾನಕ್ಕೆ ಬೆಂಬಲ ಸೂಚಿಸಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆಗ್ರಹವನ್ನು ವಿಡಿಯೊ ಮೂಲಕ ಹಂಚಿಕೊಂಡಿದ್ದಾರೆ.
ನಮ್ಮ ಕೂರ್ಗ್’ನಲ್ಲಿ ಆಸ್ಪತ್ರೆ ಇಲ್ಲ. ಒಳ್ಳೆಯ ಆಸ್ಪತ್ರೆಗಾಗಿ ನಾವು ದೂರ ಪ್ರಯಾಣ ಮಾಡಬೇಕು. ಅದರ ಬದಲು ಕೊಡಗಿನಲ್ಲಿ ಆಸ್ಪತ್ರೆ ಇದ್ದರೆ ಜನರಿಗೆ ತುಂಬಾನೇ ಉಪಯೋಗ ಆಗುತ್ತೆ. ದಯವಿಟ್ಟು ಸ್ಪಂದಿಸಿ ಎಂದು ಸಿಎಂ ಕುಮಾರಸ್ವಾಮಿ ಅವರಿಗೆ ಟ್ಯಾಗ್ ಮಾಡಿ #WeNeedEmergencyHospitalInKodagu ಅಂತಾ ಮನವಿ ಮಾಡಿಕೊಂಡಿದ್ದಾರೆ.