ಮೈಸೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್‌ಆರ್‌ಟಿಸಿ) ಮೈಸೂರು ದಸರಾ ಪ್ರಯುಕ್ತ ವಿಶೇಷ ಟೂರ್ ಪ್ಯಾಕೇಜ್ ಘೋಷಣೆ ಮಾಡಿದೆ.
2019ನೇ ಸಾಲಿನ ಮೈಸೂರು ದಸರಾ ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 8ರ ಆಚರಣೆ ಮಾಡಲಾಗುತ್ತದೆ. ಇದರ ಬೆನ್ನಲೆ ಸೆಪ್ಟೆಂಬರ್ 29ರಿಂದ ಅಕ್ಟೋಬರ್ 13ರ ತನಕ ಈ ಪ್ಯಾಕೇಜ್‌ನಲ್ಲಿ ಜನರು ಪ್ರವಾಸವನ್ನು ಕೈಗೊಳ್ಳಬಹುದಾಗಿದೆ. ಮೈಸೂರು ದಸರಾ ವೀಕ್ಷಣೆಗೆ ಬರುವ ಜನರು ಮೈಸೂರು ಸುತ್ತಮುತ್ತಲಿನ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಲು ಅನುಕೂಲವಾಗುವಂತೆ ಪ್ರವಾಸಿ ಪ್ಯಾಕೇಜ್ ಘೋಷಣೆ ಮಾಡಲಾಗಿದೆ.
ಪ್ರಸ್ತುತ ಕಾರ್ಯಾಚರಣೆ ಮಾಡುತ್ತಿರುವ ವೇಗದೂತ, ರಾಜಹಂಸ, ಐರಾವತ ಹಾಗೂ ಐರಾವತ ಕ್ಲಬ್ ಕ್ಲಾಸ್ (ಮಲ್ಟಿ ಆಕ್ಸಲ್) ಸಾರಿಗೆ ಸೇವೆಗಳ ಜೊತೆಗೆ ವಿಶೇಷ ಪ್ಯಾಕೇಜ್ ಟೂರ್ ವ್ಯವಸ್ಥೆಯನ್ನು ಮಾಡಿದೆ. ಒಂದು ದಿನದ ವಿಶೇಷ ಪ್ರವಾಸಿ ಪ್ಯಾಕೇಜ್ ಇದಾಗಿದ್ದು, ವಿವಿಧ ದರಗಳನ್ನು ನಿಗದಿ ಮಾಡಲಾಗಿದ್ದು, ಗಿರಿದರ್ಶಿನಿ, ಜಲದರ್ಶಿನಿ ಹಾಗೂ ದೇವದರ್ಶಿನಿ ಪ್ಯಾಕೇಜ್ ಪರಿಚಯಿಸಿದೆ.
‘ಗಿರಿದರ್ಶಿನಿ’ ಪ್ಯಾಕೇಜ್ ಬಂಡೀಪುರ, ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗನ ಬೆಟ್ಟ, ನಂಜನಗೂಡು ಮತ್ತು ಚಾಮುಂಡಿ ಬೆಟ್ಟವನ್ನು ಒಳಗೊಂಡಿದೆ. ವಯಸ್ಕರಿಗೆ ₹ 350 ಹಾಗೂ ಮಕ್ಕಳಿಗೆ ₹ 175 ನಿಗದಿಪಡಿಸಲಾಗಿದೆ.
‘ಜಲದರ್ಶಿನಿ’ ಪ್ಯಾಕೇಜ್ ಅಡಿ ಗೋಲ್ಡನ್ ಟೆಂಪಲ್ (ಬೈಲಕುಪ್ಪೆ), ದುಬಾರೆ ಅರಣ್ಯ ನಿಸರ್ಗಧಾಮ, ರಾಜಸೀಟ್, ಹಾರಂಗಿ ಜಲಾಶಯ ಮತ್ತು ಕೆ.ಆರ್.ಎಸ್. ದರ್ಶನ ಮಾಡಬಹುದಾಗಿದೆ. ವಯಸ್ಕರಿಗೆ ₹ 375 ಹಾಗೂ ಮಕ್ಕಳಿಗೆ ₹ 190 ಇರಲಿದೆ. ‘ದೇವದರ್ಶಿನಿ’ ಪ್ಯಾಕೇಜ್ ಅಡಿ ನಂಜನಗೂಡು, ಬ್ಲಫ್, ಮುಡುಕುತೊರೆ, ತಲಕಾಡು, ಸೋಮನಾಥಪುರ ಹಾಗೂ ಶ್ರೀರಂಗಪಟ್ಟಣ ದರ್ಶನ ಮಾಡಿಸಲಾಗುತ್ತದೆ. ವಯಸ್ಕರಿಗೆ ₹ 275 ಹಾಗೂ ಮಕ್ಕಳಿಗೆ ₹ 140 ನಿಗದಿಪಡಿಸಲಾಗಿದೆ.
ಐರಾವತ ಕ್ಲಬ್ ಕ್ಲಾಸ್ ವಾಹನಗಳಿಂದ ಮಡಿಕೇರಿ ಪ್ಯಾಕೇಜ್, ಬಂಡೀಪುರ ಪ್ಯಾಕೇಜ್, ಶಿಂಷಾ ಪ್ಯಾಕೇಜ್ ಹಾಗೂ ಊಟಿ ಪ್ಯಾಕೇಜ್ ಏರ್ಪಡಿಸಲಾಗಿದೆ. ‘ಮಡಿಕೇರಿ ಪ್ಯಾಕೇಜ್’ನಲ್ಲಿ ನಿಸರ್ಗಧಾಮ, ಗೋಲ್ಡನ್ ಟೆಂಪಲ್, ಹಾರಂಗಿ ಜಲಾಶಯ, ರಾಜಾ ಸೀಟ್, ಅಬ್ಬೀಫಾಲ್ಸ್‌ಗೆ ವಾಹನ ತೆರಳಿದೆ. ವಯಸ್ಕರಿಗೆ ₹ 1,200 ಹಾಗೂ ಮಕ್ಕಳಿಗೆ ₹ 900 ನಿಗದಿಪಡಿಸಲಾಗಿದೆ.
‘ಬಂಡೀಪುರ ಪ್ಯಾಕೇಜ್’ ಸೋಮನಾಥಪುರ, ತಲಕಾಡು, ಗೋಪಾಲಸ್ವಾಮಿ ಬೆಟ್ಟ, ಬಂಡೀಪುರ ಹಾಗೂ ನಂಜನಗೂಡು ಒಳಗೊಂಡಿದೆ. ವಯಸ್ಕರಿಗೆ ₹ 1,000 ಹಾಗೂ ಮಕ್ಕಳಿಗೆ ₹ 750 ಇರಲಿದೆ.
‘ಶಿಂಷಾ ಪ್ಯಾಕೇಜ್’ ಶಿವನಸಮುದ್ರ, ಶ್ರೀರಂಗಪಟ್ಟಣ, ರಂಗನತಿಟ್ಟು, ಬಲಮುರಿ ಫಾಲ್ಸ್, ಕೆ.ಆರ್.ಎಸ್ ಒಳಗೊಂಡಿದ್ದು, ವಯಸ್ಕರಿಗೆ ₹ 800 ಹಾಗೂ ಮಕ್ಕಳಿಗೆ ₹ 600 ಇದೆ. ‘ಊಟಿ ಪ್ಯಾಕೇಜ್’ ಊಟಿ, ಬಟಾನಿಕಲ್ ಗಾರ್ಡನ್, ಇಟಾಲಿಯನ್ ಮತ್ತು ರೋಸ್ ಗಾರ್ಡನ್, ಬೋಟ್ ಹೌಸ್ ಒಳಗೊಂಡಿದೆ. ವಯಸ್ಕರಿಗೆ ₹1,600 ಹಾಗೂ ಮಕ್ಕಳಿಗೆ ₹1,200 ಇರಲಿದೆ. ಈ ಮೈಸೂರಿನಿಂದ ಹೊರಡುವ ಸಾರಿಗೆಗಳು ವಿವಿಧ ಸ್ಥಳಗಳನ್ನು ಸಂದರ್ಶಿಸಿದ ಬಳಿಕ ಸಾಯಂಕಾಲ ಮೈಸೂರಿಗೆ ವಾಪಸ್ಸಾಗುತ್ತವೆ ಎಂದು ನಿಗಮ ಪ್ರಕಟಣೆಯಲ್ಲಿ ತಿಳಿಸಿದೆ.
ಮುಂಗಡವಾಗಿ ಟಿಕೇಟ್ ಕಾಯ್ದಿರಿಸಲು ನಿಗಮದ ವೆಬ್‌ಸೈಟ್ www.Ksrtc.inಗೆ ಸಂಪರ್ಕಿಸಿ.