ಮೈಸೂರು: ‘ತೇರಿ ಮೇರಿ. ತೇರಿ ಮೇರಿ ಕಹಾನಿ’ ಎಂಬ ಗೀತೆಯನ್ನು ಹಾಡಿ ಬಾಲಿವುಡ್‌ನಲ್ಲಿಹೊಸ ಸೆನ್ಸೇಶನ್ ಹುಟ್ಟು ಹಾಕಿದ್ದ ರಾಣು ಮೊಂಡಲ್ ಈ ಬಾರಿಯ ಯುವ ದಸರಾದ ಪ್ರಮುಖ ಆಕರ್ಷಣೆ…
ಮುಂಬಯಿನ ರೈಲ್ವೆ ನಿಲ್ದಾಣದಲ್ಲಿಭಿಕ್ಷೆ ಬೇಡುತ್ತಿದ್ದ ರಾಣು ಮೊಂಡಲ್ ಲತಾ ಮಂಗೇಶ್ಕರ್ ಅವರ ‘ಏಕ್ ಪ್ಯಾರ್ ಕಾ ನಗ್ಮಾ ಹೈ’ ಗೀತೆ ಹಾಡಿದ್ದನ್ನು ಯಾರೋ ಒಬ್ಬರು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹರಿಯ ಬಿಟ್ಟಿದ್ದರು. ಮಧುರ ಧ್ವನಿಯಿದ್ದ ಆ ವಿಡಿಯೋ ವೈರಲ್ ಆಗುತ್ತಿದ್ದಂತೆ ರಾಣು ಮೊಂಡಲ್ ಅವರ ಬದುಕೇ ಬದಲಾಗಿ ಹೋಯಿತು. ಖ್ಯಾತ ಸಂಗೀತ ನಿರ್ದೇಶಕ ಹಿಮೇಶ್ ರಿಶಮಿಯಾ ಅವರು ತಮ್ಮ ಸಿನಿಮಾದಲ್ಲಿಹಾಡಲು ಅವಕಾಶ ಕೊಟ್ಟರು. ಮೊದಲ ಬಾರಿಗೆ ‘ತೇರಿ ತೇರಿ.. ತೇರಿ ಮೇರಿ. ತೇರಿ ಮೇರಿ ಕಹಾನಿ’ ಹಾಡಿದ ರಾಣು ಅವರು ಒಂದೇ ದಿನದಲ್ಲಿಸ್ಟಾರ್ ಸಿಂಗರ್ ಆಗಿ ರೂಪುಗೊಂಡರು.
”ಅ.1ರಂದು ಯುವ ದಸರಾದಲ್ಲಿರಾಣು ಮೊಂಡಲ್ ಅವರನ್ನು ಗೌರವಿಸಲಾಗುತ್ತಿದೆ. ಪ್ರತಿಭೆಗೆ ಮೇಲು-ಕೀಳು ಎಂಬುದಿಲ್ಲ. ನಿಜವಾದ ಪ್ರತಿಭೆ ಇದ್ದರೆ ಯಾರು ಏನು ಬೇಕಾದರೂ ಸಾಧನೆ ಮಾಡಬಹುದು ಎಂಬ ಸಂದೇಶವನ್ನು ಯುವ ಜನತೆಗೆ ಸಾರುವ ಉದ್ದೇಶದಿಂದ ರಾಣು ಮೊಂಡಲ್ ಅವರನ್ನು ಕರೆಸಲಾಗುತ್ತಿದೆ. ಸನ್ಮಾನದ ಜತೆಗೆ ರಾಣು ಮೊಂಡಲ್ ಅವರು ಒಂದೆರಡು ಹಾಡನ್ನು ಹಾಡಲಿದ್ದಾರೆ,” ಎಂದು ಯುವ ದಸರಾ ಸಮಿತಿ ಕಾರ್ಯದರ್ಶಿ ಸೋಮಶೇಖರ್ ತಿಳಿಸಿದ್ದಾರೆ.
ಇನ್ನು ಇತ್ತೀಚಿಗೆ ವರ್ಲ್ಡ್ ಬಾಡ್ಮಿಂಟನ್ ಚಾಂಪಿಯನ್‌ಶಿಪ್ ಗೆದ್ದು ಕ್ರೀಡಾಲೋಕದ ಕಣ್ಮಣಿಯಾಗಿರುವ ಹಾಗೂ ಯುವಜನತೆಯ ಸ್ಪೂರ್ತಿ ಪಿ.ವಿ.ಸಿಂಧೂ ಅವರು ಈ ಬಾರಿಯ ಯುವ ದಸರಾ ಉದ್ಘಾಟಿಸಲಿದ್ದಾರೆ.
Source: Vijayakarnataka